ಹುಬ್ಬಳ್ಳಿ: "ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಪಾತ್ರವಿಲ್ಲ" ಎಂದು ದೂರುದಾರೆ ಸುನೀತಾ ಚೌಹಾಣ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಬಂಧನದ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಮ್ಮ ಪಕ್ಷದಿಂದ ಟಿಕೆಟ್ ಸಿಗುವ ಸಾಧ್ಯತೆ ಇತ್ತು. ಬಿಜೆಪಿಯಿಂದ ಟಿಕೆಟ್ ಕೊಡಿಸುತ್ತೇನೆ ಅಂದ್ರು. ಟಿಕೆಟ್ ಕೊಡಿಸೋದಾಗಿ 2 ಕೋಟಿ ರೂ. ಬೇಡಿಕೆ ಇಟ್ಟು, 25 ಲಕ್ಷ ಹಣ ಪಡೆದಿದ್ದರು. ಕೊಟ್ಟ ಹಣ ವಾಪಸ್ ಮಾಡಿರಲಿಲ್ಲ. ಹೀಗಾಗಿ ನಾವು ದೂರು ಕೊಟ್ಟಿದ್ದೇವೆ" ಎಂದರು.
"ಗೋಪಾಲ್ ಜೋಶಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಹೈಕಮಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕೇಂದ್ರ ಸಚಿವರ ಪಾತ್ರ ಇಲ್ಲ. ನಾನು ಹೈಕಮಾಂಡ್ ನಾಯಕರನ್ನು ಭೇಟಿ ಆಗಿಲ್ಲ. ನೇರವಾಗಿ ಗೋಪಾಲ್ ಜೋಶಿ ಅವರಿಗೆ ದುಡ್ಡು ಕೊಟ್ಟಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಂಚನೆ ಆರೋಪ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಣ್ಣ ಅರೆಸ್ಟ್, ಹುಬ್ಬಳ್ಳಿಗೆ ಕರೆತಂದು ಪರಿಶೀಲನೆ