ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಾಜಿ ಸಚಿವ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಕುಟುಂಬಕ್ಕೆ ಸಂಕಷ್ಟ ಎದುರಿಸುತ್ತಿದೆ. ಸಂತ್ರಸ್ತ ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ರೇವಣ್ಣ ಜೈಲು ಸೇರಿದ್ದರು. ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಪುತ್ರ ಪ್ರಜ್ವಲ್ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಕೆ.ಆರ್.ನಗರದ ಮಹಿಳೆಯನ್ನು ಅಪಹರಿಸಿದ ಆರೋಪ ರೇವಣ್ಣ ಮೇಲಿದೆ. ಇದೇ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಇಂದು ಕೋರ್ಟ್ ಅರ್ಜಿಯನ್ನು ವಜಾಗೊಳಿಸುತ್ತಿದ್ದಂತೆ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಭವಾನಿ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲು ಮುಂದಾಗಿದ್ದಾರೆ.
ಇದಕ್ಕೂ ಮುನ್ನ ಎಸ್ಐಟಿಗೆ ಪತ್ರ ಬರೆದಿರುವ ಭವಾನಿ ರೇವಣ್ಣ ವಿಚಾರಣೆಗೆ ಸಹಕಾರ ನೀಡಲಿದ್ದು, ನಾಳೆ ನಮ್ಮ ಮನೆಯಲ್ಲಿ ವಿಚಾರಣೆ ನಡೆಸುವಂತೆಯೂ ತಿಳಿಸಿದ್ದಾರೆ. ಇದೇ ಪತ್ರದ ಆಧಾರದ ಮೇರೆಗೆ ಭವಾನಿ ರೇವಣ್ಣ ನಾಳೆ ಅವರ ಮನೆಗೆ ಹೋಗಿ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.
ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ತಮ್ಮನ್ನು ಬಂಧಿಸಬಹುದು ಎಂಬ ಭೀತಿ ಭವಾನಿ ಅವರಿಗಿದೆ. ಅಪಹರಣ ಪ್ರಕರಣದಲ್ಲಿ ಸಂತ್ರಸ್ತೆಯ ವಿಚಾರಣೆ ವೇಳೆ ಭವಾನಿ ವಿರುದ್ದ ಆರೋಪ ಮಾಡಲಾಗಿದ್ದು, ಇದೇ ಹೇಳಿಕೆ ಆಧರಿಸಿ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಅಲ್ಲದೇ, ಸಂತ್ರಸ್ತೆಯ ಹೇಳಿಕೆ ಆಧರಿಸಿ ಭವಾನಿ ಅವರನ್ನು ಆರೋಪಿತೆಯಾಗಿ ಮಾಡಲು ಚಿಂತನೆ ನಡೆಸಿರುವುದಾಗಿಯೂ ತಿಳಿದುಬಂದಿದೆ.