ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರ ರಾಜ್ಯ ರಾಜಕೀಯದಲ್ಲಿ ಗಮನ ಸೆಳೆಯುತ್ತಿರುವ ಪ್ರಮುಖ ಕ್ಷೇತ್ರವಾಗಿದೆ. ನಾಲ್ಕು ಸಲ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಒಂದು ಕಡೆ ಕಾಂಗ್ರೆಸ್ ಹವಣಿಸುತ್ತಿದ್ದರೆ ಇದಕ್ಕೆ ಪೂರಕವೆಂಬಂತೆ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳ ಪ್ರವೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಲಿಂಗಾಯತ ಸಮುದಾಯವನ್ನು ಪ್ರಹ್ಲಾದ್ ಜೋಶಿ ತುಳಿಯುತ್ತಿದ್ದಾರೆ. ಲಿಂಗಾಯತ ನಾಯಕರು ಹಾಗೂ ಸ್ವಾಮೀಜಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಸೋಲಿಸುವದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದ್ರೆ ಇದುವರೆಗೂ ತಾವಾಗಲಿ ಅಥವಾ ತಮ್ಮ ಪರವಾಗಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಕಾಶಿ ಶ್ರೀ ಆಶೀರ್ವಾದ ಪಡೆದ ಜೋಶಿ: ಇಂದು ಧಾರವಾಡಕ್ಕೆ ಆಗಮಿಸಿದ್ದ ಶ್ರೀ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ವಾರಣಾಸಿಯ ಕಾಶಿ ಜ್ಞಾನಪೀಠದ ಜಗದ್ಗುರುಗಳಾದ ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದರು ಧಾರವಾಡದಲ್ಲಿ ಆತ್ಮೀಯ ಭಕ್ತ ಗಣದಲ್ಲಿ ಒಬ್ಬರಾಗಿರುವ ಡಾ. ರಾಮನಗೌಡ ಅವರ ಮನೆಗೆ ಆಗಮಿಸಿದ್ದರು. ಈ ವೇಳೆ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸತತ 5ನೇ ಬಾರಿ ಕಣಕ್ಕಿಳಿದಿರುವ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ವಾರಣಾಸಿ ಕಾಶಿ ಪೀಠ ವೀರಶೈವ ಸಮಾಜದ ದಾರಿದೀಪ: ವೀರಶೈವ ಸಮಾಜಕ್ಕೆ ಸದಾ ದಾರಿದೀಪ ಎಂಬಂತೆ ಇರುವ ಪಂಚ ಪೀಠಗಳ ಪೈಕಿ ಜ್ಞಾನಪೀಠ ವಾರಣಾಸಿಯ ಕಾಶಿ ಪೀಠದ ಜಗದ್ಗುರುಗಳು ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶಾಲು ಹೊದಿಸಿ ಫಲ-ತಾಂಬೂಲ ನೀಡಿ ಸತ್ಕರಿಸುವ ಮೂಲಕ ಆಶೀರ್ವಾದ ಮಾಡಿದರು.
ದಿಂಗಾಲೇಶ್ವರ ಶ್ರೀಗಳ ನಡೆಯ ಬೆನ್ನಲ್ಲೇ ಈ ಭೇಟಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.