ಹುಬ್ಬಳ್ಳಿ: ''ಪ್ರಧಾನಿ ನರೇಂದ್ರ ಮೋದಿ ಧಾರವಾಡ ಸೇರಿ ರಾಜ್ಯದ ಐದು ಕಡೆಗೆ ಮುಂಬರುವ ದಿನಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಭಾನುವಾರ ಮಾಹಿತಿ ಲಭಿಸಿದೆ. ಧಾರವಾಡದಲ್ಲಿ ಎಲ್ಲಿ ಸಮಾವೇಶ ಮಾಡಬೇಕೆಂಬುದರ ಕುರಿತು ಎರಡು ದಿನಗಳಲ್ಲಿ ಸ್ಥಳ ಫೈನಲ್ ಮಾಡುತ್ತೇವೆ. ಈ ಬಗ್ಗೆ ಸಿದ್ಧತೆ ನಡೆಸಲು ಸೂಚನೆ ಕೊಟ್ಟಿದ್ದೇನೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಇಂದು (ಸೋಮವಾರ) ಮಾತನಾಡಿದ ಅವರು, ''ಹಿಂದೆ ನರೇಂದ್ರ ಮೋದಿ ಅವರು ಧಾರವಾಡಕ್ಕೆ ಬಂದಾಗ ಐತಿಹಾಸಿಕ ಕಾರ್ಯಕ್ರಮ ಆಗಿದೆ. ಆಗ 'ನ ಭುತೋ ನ ಭವಿಷ್ಯ' ಅನ್ನೋ ತರಹ ರ‍್ಯಾಲಿ ಆಗಿದೆ. ಅದರಂತೆ ಚುನಾವಣೆ ಟಿಕೆಟ್ ಘೋಷಣೆ ಬಳಿಕ ರಾಜ್ಯಕ್ಕೆ ಬರುತ್ತಾರೆ'' ಎಂದು ತಿಳಿಸಿದರು.
ಬಿಜೆಪಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ''ನಾನು ಇವತ್ತು ದೆಹಲಿಗೆ ಹೋಗುತ್ತಿದ್ದೇನೆ. ಇವತ್ತು ಚರ್ಚೆ ಬಳಿಕ ಅಂತಿಮ ತೀರ್ಮಾನ ಆಗಲಿದೆ. ನಾನು ದೆಹಲಿಗೆ ಹೋದ ಬಳಿಕ ನಿಮಗೆ ಬೇಕಿದ್ರೆ ಮಾಹಿತಿ ಕೊಡುತ್ತೇನೆ''. ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ''ಈಗಾಗಲೇ ಬಿಜೆಪಿ ಈ ಕುರಿತು ಅಭಿಪ್ರಾಯ ತಿಳಿಸಿದೆ. ಈ ಕುರಿತು ನಾನು ಮಾತನಾಡುವುದಿಲ್ಲ'' ಎಂದರು.
ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, ''ಮೈತ್ರಿಯಿಂದ ಇಬ್ಬರಿಗೂ ಲಾಭ ಆಗುತ್ತದೆ. ಕೆಲವು ಕಡೆ ಜೆಡಿಎಸ್ ಸ್ಟ್ರಾಂಗ್ ಇದೆ. ಕೆಲವು ಕಡೆ ಬಿಜೆಪಿ ವೋಟ್ ಬ್ಯಾಂಕ್ ಇದೆ. ಹೀಗಾಗಿ ನಾವು 28 ಕ್ಷೇತ್ರದಲ್ಲಿ ಗೆಲ್ಲುತ್ತೇವೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
''ಸಭೆಯಲ್ಲಿ ಜೆಡಿಎಸ್ಗೆ ಎಷ್ಟು ಟಿಕೆಟ್ ಅನ್ನೋದು ತೀರ್ಮಾನ ಆಗಲಿದೆ. ಮಂಡ್ಯ ಕೊಡಬೇಕೋ, ಯಾವ ಕ್ಷೇತ್ರ ಅನ್ನೋದು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಎಲ್ಲವೂ ಚರ್ಚೆಯ ಬಳಿಕವೇ ಅಂತಿಮ ಆಗಲಿದೆ'' ಎಂದರು.
ಬಿಜೆಪಿಯಲ್ಲಿ ಟಿಕೆಟ್ ವಿಚಾರದಲ್ಲಿ ಅಸಮಾಧಾನ ವಿಚಾರವಾಗಿ ಮಾತನಾಡಿ, ''ಈಗಾಗಲೇ ದೇಶದಲ್ಲಿ ಎಲ್ಲ ಕಡೆ ಬಿಜೆಪಿ ಗೆಲ್ಲುತ್ತದೆ ಅಂತಿದೆ. ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳೇ ಇಲ್ಲ. ನಮ್ಮಲ್ಲಿ ಸ್ವಲ್ಪ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದೆ. ಯಾರೇ ಇದ್ದರೂ ನಾವು ಸಂಬಂಧಿಸಿದವರ ಜೊತೆ ಮಾತನಾಡುತ್ತೇವೆ. ಜನ ಮೋದಿಗೆ ವೋಟ್ ಹಾಕಲು ತೀರ್ಮಾನ ಮಾಡಿದ್ದಾರೆ. ಟಿಕೆಟ್ ಕಗ್ಗಂಟು ನಮ್ಮಲ್ಲಿ ಇಲ್ಲ" ಎಂದು ತಿಳಿಸಿದರು.
ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪೋ ವಿಚಾರವಾಗಿ ಮಾತನಾಡಿ, ''ಆ ತರಹ ಏನಿಲ್ಲ, ಸಂಸದರ ಕೆಲಸ, ಸಂಘಟನೆ, ಪಕ್ಷ ಸಂಘಟನೆ ಎಲ್ಲವನ್ನೂ ನೋಡ್ತಾರೆ. ಆ ಬಳಿಕ ಟಿಕೆಟ್ ಹಂಚಿಕೆ ಆಗಲಿದೆ'' ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನೂ ಓದಿ: ಸಂವಿಧಾನ ಕುರಿತ ಅನಂತ್ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಅಲ್ಲ, ಬಿಜೆಪಿಯ ಗುಪ್ತ ಅಜೆಂಡಾ: ಸಿಎಂ