ಉಡುಪಿ : ಉಡುಪಿ ಪ್ರವಾಸಿ ಮಂದಿರಕ್ಕೆ ಬೆಳಕು ಭಾಗ್ಯ ಬದಲು ಕತ್ತಲೆ ಭಾಗ್ಯ ಸಿಕ್ಕಿದೆ. ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸದೇ ಹಾಗೆ ಉಳಿದಿದ್ದರಿಂದ ಮೆಸ್ಕಾಂನವರು ವಿದ್ಯುತ್ ಕಡಿತಗೊಳಿಸಿದ್ದಾರೆ.
ಗಣ್ಯರು, ನ್ಯಾಯಾಧೀಶರು, ಸಚಿವರು ತಂಗುವ ಉಡುಪಿ ಪ್ರತಿಷ್ಠಿತ ಪ್ರವಾಸಿ ಮಂದಿರಕ್ಕೆ ಈಗ ಕತ್ತಲೆ ಭಾಗ್ಯ ಬಂದಿದೆ. ಮೆಸ್ಕಾಂ ಬಿಲ್ ಬಾಕಿಯಿರುವ ಪರಿಣಾಮ ಉಡುಪಿ ಪ್ರವಾಸಿ ಮಂದಿರದ ಟ್ರಾನ್ಸ್ಫಾರ್ಮರ್ ಮೂಲಕವೇ ವಿದ್ಯುತ್ ಕಡಿತಗೊಳಿಸಿದ್ದಾರೆ.
ಲಕ್ಷಾಂತರ ರೂಪಾಯಿ ಬಿಲ್ ಬಾಕಿ : ಕಳೆದ ಒಂದು ವರ್ಷದಿಂದ ಪ್ರವಾಸಿ ಮಂದಿರ 3 ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದೆ. ಹೀಗಾಗಿ ಭಾನುವಾರ ರಾತ್ರಿ ವೇಳೆಯಲ್ಲಿ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಇದು ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿ.ಇತ್ತೀಚಿಗೆ ಕಾಪುವಿನ ಪಡುಬಿದ್ರಿ ಗ್ರಾಮ ಪಂಚಾಯತ್ನಲ್ಲೂ, ಉಡುಪಿಯ ತೆಂಕನಿಡಿಯೂರು ಸರ್ಕಾರಿ ಕಾಲೇಜಿನಲ್ಲೂ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಸರ್ಕಾರದ ಬಳಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ. ರಾಜ್ಯ ಸರ್ಕಾರ ದಿವಾಳಿಯಾಗಿರುವುದಕ್ಕೆ ಬೇರೆ ನಿದರ್ಶನ ಬೇಡ ಎಂದು ಹೇಳಿದರು.
ಇದನ್ನೂ ಓದಿ : ಬಿಲ್ ಬಂದ 30 ದಿನದೊಳಗೆ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ: ಬೆಸ್ಕಾಂ - Electricity Bill Payment