ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಆರ್ಭಟ ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು, ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ 16 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿ ಮುನ್ನೆಚ್ಚರಿಕೆ ನೀಡಿದೆ.
ಯಾವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಮತ್ತು ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಗುಡುಗು ಸಹಿತ ಮಳೆ ಬೀಳಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಂಭವವಿದ್ದು, ದಕ್ಷಿಣ ಒಳನಾಡು ಉಳಿದ ಜಿಲ್ಲೆಗಳಲ್ಲಿ ಸಹ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಗುಡುಗು ಸಹಿತ ಮಳೆ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳೀಯ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 20 ಡಿಗ್ರಿ ದಾಖಲಾಗಲಿದೆ. ನಿನ್ನೆಯಿಂದ ಬೆಂಗಳೂರು ನಗರ ಮತ್ತು ಹೆಚ್.ಎ.ಎಲ್ ವಿಮಾನ ನಿಲ್ದಾಣ ವ್ಯಾಪ್ತಿಯ ರೆಕಾರ್ಡಿಂಗ್ ಸ್ಟೇಷನ್ನಲ್ಲಿ ಕ್ರಮವಾಗಿ 24.8 ಹಾಗು 29 ಎಂಎಂ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯ ಮೇಲಿರುವ ಚಂಡಮಾರುತವು ಈಗ ಉತ್ತರ ತಮಿಳುನಾಡು - ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಮೇಲೆ 1.5 ಕಿ.ಮೀ ಯಿಂದ 5.8 ಕಿ.ಮೀ ಎತ್ತರದಲ್ಲಿ ಹಾದು ಹೋಗಲಿದೆ. ಇನ್ನೊಂದು ಚಂಡಮಾರುತ ಆಗ್ನೇಯ ಅರೇಬಿಯನ್ ಸಮುದ್ರದಿಂದ ಉತ್ತರ ಕೇರಳದಲ್ಲಿ ಹಾದು ಹೋಗಿ ರಾಯಲಸೀಮಾ ತಲುಪಲಿದೆ. ಇದು ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಇರಲಿದೆ. ಈ ಹಿನ್ನೆಲೆಯಲ್ಲಿ ಮುಂಗಾರು ಮಾರುತಗಳು ಬಹುತೇಕ ರಾಜ್ಯದಿಂದ ಸರಿದು ಹೋಗಿದ್ದು, ಹಿಂಗಾರು ಮಾರುತಗಳ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಒಳನಾಡಿನಲ್ಲಿ ಮಳೆ ಸಾಮಾನ್ಯವಾಗಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದೆ. ನಿನ್ನೆಯಿಂದ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಕೊಡಗು ಜಿಲ್ಲೆಯ ನಾಪೋಕ್ಲು ಪ್ರದೇಶದಲ್ಲಿ 9 ಸೆಂ.ಮೀ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಭಾರಿ ಮಳೆಗೆ ಅಪಾರ್ಟ್ಮೆಂಟ್ ಕಂಪೌಂಡ್ ಕುಸಿತ, 20ಕ್ಕೂ ಹೆಚ್ಚು ಬೈಕ್ಗಳು ಜಖಂ - Bengaluru Rain