ದಾವಣಗೆರೆ: 'ದಾಳಿಂಬೆ'ಗೆ ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೆ. ಇದನ್ನು ಮನಗಂಡು ರೈತನೊಬ್ಬ ಲಕ್ಷಾಂತರ ಹಣವನ್ನು ಖರ್ಚು ಮಾಡಿ ದಾಳಿಂಬೆ ಬೆಳೆದಿದ್ದನು. ಆದರೆ, ಹೆಚ್ಚು ಮಳೆ ಸುರಿದ ಪರಿಣಾಮ ಇಡೀ ದಾಳಿಂಬೆ ಬೆಳೆಗೆ ಚುಕ್ಕಿ ರೋಗ, ಮೂತಿ ರೋಗ ತಗುಲಿ ಇಡೀ ಬೆಳೆ ನೆಲಕಚ್ಚಿದೆ. ಇನ್ನೆರಡು ತಿಂಗಳಿಗೆ ರೈತನ ಕೈ ಸೇರಬೇಕಿದ್ದ ದಾಳಿಂಬೆ ಬೆಳೆ ಗಿಡದಲ್ಲೇ ಒಣಗಲಾರಂಭಿಸಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಸ್ತೆಮಾಕುಂಟೆ ಗ್ರಾಮದ ರೈತರಾದ ಸ್ವಾಮಿ ನಾಲ್ಕು ಎಕರೆ ಜಮೀನಿನಲ್ಲಿ ಮೂರನೇ ಬೆಳೆಗೆ 6-7 ಲಕ್ಷ ಹಣ ವ್ಯಯ ಮಾಡಿ ದಾಳಿಂಬೆ ಬೆಳೆ ಹಾಕಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪೋಷಿಸಿಕೊಂಡು ಬಂದಿದ್ದ ದಾಳಿಂಬೆ ಬೆಳೆಯ ಫಸಲು ಕೈಗೆ ಬಂದಿತ್ತು. ಅದರೇ ವಿಪರೀತ ಮಳೆ ರೈತನ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಹೆಚ್ಚು ಮಳೆ ಬಿದ್ದಿರುವ ಕಾರಣ 4 ಎಕರೆ ದಾಳಿಂಬೆಗೆ ಚುಕ್ಕಿ ರೋಗ (ಮೂತಿ ರೋಗ) ಆವರಿಸಿದೆ.
ಎರಡು ತಿಂಗಳು ಬಿಟ್ಟಿದ್ದರೆ ಫಸಲು ಕೈಗೆ ಬಂದು ಅಂದಾಜು 25 ಲಕ್ಷ ರೂ ಲಾಭಗಳಿಸುತ್ತಿದ್ದರು. ದಾಳಿಂಬೆ ಹಣ್ಣಿನ ಪ್ರಸ್ತುತ ಮಾರುಕಟ್ಟೆ ದರ ಕೆಜಿಗೆ 150ರೂ. ಇದೆ.
ಎರಡನೇ ಬೆಳೆಗೆ ಬೆರಳೆಣಿಕೆಯಷ್ಟು ಲಾಭ: ನಾಲ್ಕು ವರ್ಷದ ಹಿಂದೆ ಹಾಕಿದ್ದ ದಾಳಿಂಬೆ ಬೆಳೆ ಬೆರಳೆಣಿಕೆಯಷ್ಟು ಲಾಭ ನೀಡಿದೆ. ಗಿಡ, ಗುಣಿ, ಗೊಬ್ಬರ, ಔಷಧ, ಗಿಳಿ, ಗೊರವಂಕ ತಡೆಗೆ ಬಲೆ, ಉಳುಮೆ, ಚಿಗುರು ಕತ್ತರಿಸಲು ಕಾರ್ಮಿಕರ ಬಳಕೆ, ಕೊಟ್ಟಿಗೆ ಗೊಬ್ಬರ ಹೀಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದರು. ಈ ವರ್ಷ ಕನಿಷ್ಠ 25 ಲಕ್ಷ ರೂ. ಆದಾಯ ಬಂದು, ಹಿಂದಿನ ಮೂರು ವರ್ಷ ಮಾಡಿದ್ದ ಸಾಲ ಬಗೆ ಹರಿಯುತ್ತದೆ ಎಂದು ಕನಸು ಕಂಡಿದ್ದ ರೈತ ಸ್ವಾಮಿ ಅವರಿಗೆ ಮತ್ತೆ ವರುಣಾಘಾತವಾಗಿದೆ.
ತುಮಕೂರಿನಿಂದ ಸಸಿ ತರಿಸಿದ್ದ ರೈತ: "ಮಳೆ ಹೆಚ್ಚಾಗಿ ಮೂತಿ ರೋಗ ಹಾಗೂ ಚುಕ್ಕಿ ರೋಗ ದಾಳಿಂಬೆಗೆ ಆವರಿಸಿದೆ. ಫಸಲಿಗಾಗಿ ಒಟ್ಟು 6-7 ಲಕ್ಷ ವ್ಯಯ ಮಾಡಿದ್ದೆ. ಮೂರು ಬೆಳೆಗಳ ಪೈಕಿ ಈ ಬಾರಿ ಎಲ್ಲಾ ಲಾಸ್ ಆಗಿದೆ. ನಾಲ್ಕು ಎಕರೆಯಲ್ಲಿ 1,200 ಗಿಡಗಳು ನೆಡಲಾಗಿದೆ. ಸಸಿಗಳನ್ನು ತುಮಕೂರು ಜಿಲ್ಲೆಯ ನಿಟ್ಟೂರಿನಿಂದ ತರಿಸಲಾಗಿದೆ. ಸಸಿ ಚೆನ್ನಾಗಿದೆ ಆದರೇ ಮಳೆ ಹೆಚ್ಚಾಗಿ ಬೆಳೆ ಕೈಕೊಟ್ಟಿದೆ. ಅಲ್ಲದೇ ಗಿಳಿ ಕಾಟ ಇದೆ. ಫಸಲು ಕೈಗೆ ಬಂದಿತ್ತು, 25 ಲಕ್ಷ ಲಾಭ ಆಗಬೇಕಾಗಿತ್ತು. ಮಳೆ ಹೆಚ್ಚಾದ್ದರಿಂದ ನಷ್ಟವಾಗಿದೆ. ಸರ್ಕಾರ ನಮ್ಮತ್ತ ಗಮನಹರಿಸಬೇಕೆಂದು" ರೈತ ಸ್ವಾಮಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಹಾವೇರಿಯಲ್ಲಿ ದೀಪಾವಳಿ ಸಂಭ್ರಮಕ್ಕೆ ಮಳೆ ಅಡ್ಡಿ: ಮನೆಗಳಿಗೆ ನುಗ್ಗಿದ ನೀರು, ಸೇತುವೆ ಮುಳುಗಡೆ