ಬೆಂಗಳೂರು: ರಾಜಕಾರಣ ಹಾಗೂ ಕ್ರಿಕೆಟ್ ಎರಡೂ ಸಹ ಬೇರೆ ಬೇರೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಇಂದು ಆಯೋಜಿಸಲಾಗಿದ್ದ 1983 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ, ಕನ್ನಡಿಗ ಸೈಯದ್ ಕಿರ್ಮಾನಿ ಅವರ ಆತ್ಮಕಥೆ "ಸ್ಟಂಪ್ಡ್ : ಲೈಫ್ ಬಿಹೈಂಡ್ ಆ್ಯಂಡ್ ಬಿಯಾಂಡ್ ದಿ ಟ್ವೆಂಟಿ ಟು ಯಾರ್ಡ್ಸ್" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ರಾಜಕೀಯ ಹಾಗೂ ಕ್ರಿಕೆಟ್ ಎರಡೂ ಬೇರೆ ಬೇರೆ, ರಾಜಕಾರಣಿಗಳು ಕ್ರಿಕೆಟ್‌ನಿಂದ ಯಾವಾಗಲೂ ದೂರವಿರಬೇಕು. ಆದರೆ ನಾನು ಡಿಸಿಎಂ ಆಗಿ ಅಲ್ಲ ಬದಲಿಗೆ ಸೈಯದ್ ಕಿರ್ಮಾನಿಯವರ ಅಭಿಮಾನಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಶಾಲಾ ದಿನಗಳಿಂದಲೂ ನಾನು ಸೈಯದ್ ಕಿರ್ಮಾನಿ, ಜಿ.ಆರ್.ವಿಶ್ವನಾಥ್ ಹಾಗೂ ಬಿ. ಎಸ್. ಚಂದ್ರಶೇಖರ್ ಅವರ ಅಭಿಮಾನಿ" ಎಂದರು.
"ಆ ದಿನಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ನಾಗರಾಜ್ ಅವರ ಮಗ ಹಾಗೂ ನಾನು ಸಹಪಾಠಿಗಳಾಗಿದ್ದೆವು. ಆಗ ನಾನು ಅವರ ಬಳಿ ಭಾರತ - ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ಪಂದ್ಯಗಳ ಟಿಕೆಟ್ ಕೇಳುತ್ತಿದ್ದೆ. ನಂತರ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥನಾದ ಬಳಿಕ ಪತ್ರ ಬರೆಸಿಕೊಂಡು ಬಂದು ನೂರು ಟಿಕೆಟ್ ಪಡೆದು, ನಂತರ ಹಂಚುತ್ತಿದ್ದೆ'' ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಉದ್ಯಮಿ ಇನ್ಫೋಸಿಸ್ ಮುಖ್ಯಸ್ಥ ಎನ್. ಆರ್. ನಾರಾಯಣಮೂರ್ತಿ, ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಎರ್ರಪಳ್ಳಿ ಪ್ರಸನ್ನ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಬ್ರಿಜೇಶ್ ಪಟೇಲ್, ವಿ.ವಿ.ಎಸ್. ಲಕ್ಷ್ಮಣ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ: ರ‍್ಯಾಪಿಡ್ ಚೆಸ್ನಲ್ಲಿ ಭಾರತಕ್ಕೆ ಮತ್ತೊಂದು ಕಿರೀಟ: 37 ವರ್ಷದ ಕೊನೇರು ಹಂಪಿ ವಿಶ್ವ ಚಾಂಪಿಯನ್