ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಎಸೆದಿರುವ ಮೊಬೈಲ್ ಫೋನ್‌ಗಳ ಪತ್ತೆಗಾಗಿ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ನೆರವು ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಹತ್ಯೆಯಾದ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರನ ಮೊಬೈಲ್ ಫೋನ್‌ಗಳಿಗಾಗಿ ಕಳೆದ 11 ದಿನಗಳಿಂದಲೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಅವುಗಳ ಪತ್ತೆಗಾಗಿ ಅಗ್ನಿಶಾಮಕ ದಳದ ಸಹಾಯ ಪಡೆಯಲಿದ್ದಾರೆ.
ಪಟ್ಟಣಗೆರೆಯ ಶೆಡ್ನಲ್ಲಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡುವಾಗ A5 ಆರೋಪಿ ರಾಘವೇಂದ್ರನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. ಅಲ್ಲದೇ, ಆರೋಪಿಗಳ ಸಿಟ್ಟಿಗೆ ಕಾರಣವಾದ ಮೆಸೇಜ್ ಸೇರಿದಂತೆ ಇತರ ಅಂಶಗಳು ರೇಣುಕಾಸ್ವಾಮಿಯ ಮೊಬೈಲ್ ಫೋನ್‌ನಲ್ಲಿವೆ. ಆದರೆ, ಜೂನ್ 9ರ ಮುಂಜಾನೆ ರೇಣುಕಾಸ್ವಾಮಿ ಹಾಗೂ ರಾಘವೇಂದ್ರನ ಮೊಬೈಲ್ ಪಡೆದುಕೊಂಡಿದ್ದ ಆರೋಪಿ ಪ್ರದೋಶ್, ಅವುಗಳನ್ನು ಸುಮನಹಳ್ಳಿಯ ರಾಜಕಾಲುವೆಗೆ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾನೆ.
ಅದರ ಅನ್ವಯ, ರಾಜಕಾಲುವೆಯ ಬಳಿ ಮಹಜರ್ ನಡೆಸಿದ್ದ ಪೋಲಿಸರು, ಬಿಬಿಎಂಪಿ ಪೌರ ಕಾರ್ಮಿಕರ ಸಹಾಯದಿಂದ ರಾಜಕಾಲುವೆಯಲ್ಲಿ ಮೊಬೈಲ್ ಹುಡುಕಾಡಿದ್ದಾರೆ. ಎಷ್ಟೇ ಹುಡುಕಾಡಿದರೂ ಸಹ ಫೋನ್‌ಗಳು ಪತ್ತೆ ಆಗಿಲ್ಲ. ಮೊಬೈಲ್ ಪತ್ತೆ ಹಚ್ಚಿಕೊಡುವಂತೆ ರಾಜಾಜಿನಗರ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ಪೊಲೀಸರು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾಜಕಾಲುವೆಯಲ್ಲಿ ಬಿಸಾಕಿದ್ದ ರೇಣುಕಾಸ್ವಾಮಿ ಮೊಬೈಲ್ಗಾಗಿ ಪೊಲೀಸರ ತಲಾಶ್ - Search For Renukaswamy Mobile