ಶಿವಮೊಗ್ಗ: ಜಿಲ್ಲೆಯ ಪೊಲೀಸರ ಪಿಸ್ತೂಲು ರೌಡಿಗಳ ಮೇಲೆ ಸದ್ದು ಮಾಡಿದೆ. ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿಯ ಕಾಲಿಗೆ ಗುಂಡೇಟು ಬಿದ್ದಿದೆ.
ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.
ರಜಾಕ್ ಎಂಬಾತ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಆರೋಪಿಯಾಗಿದ್ದ. ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕೊಲೆ ಪ್ರಕರಣದಲ್ಲೂ ಈತನ ವಿರುದ್ಧ ಪ್ರಕರಣಗಳಿವೆ.
ಆರೋಪಿ ಮೇಲೆ ಐದು ಪ್ರಕರಣಗಳಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಅನೇಕ ದಿನಗಳಿಂದ ನ್ಯಾಯಾಲಯಕ್ಕೂ ಹಾಜಾರಾಗಿರಲಿಲ್ಲ. ಇದೇ ತನಿಖೆಯಲ್ಲಿದ್ದ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಿಪತಿ ಅವರಿಗೆ ಆರೋಪಿ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ಯಾಜುವಳ್ಳಿಯ ಕಾಡಿನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿಖರ ಮಾಹಿತಿ ಬೆನ್ನಲ್ಲೇ ಆತನನ್ನು ಬಂಧಿಸಲು ಪಿಐ ಮತ್ತು ಸಿಬ್ಬಂದಿ ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಅರ್ಜುನ್ ಎಂಬವರ ಮೇಲೆ ರಜಾಕ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ.
ತಕ್ಷಣ ಪಿಐ ಲಕ್ಷ್ಮಿಪತಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೂ ಮಾತು ಕೇಳದ ರಜಾಕ್ ಪಿಐ ಮೇಲೆ ಹಲ್ಲೆ ಮಾಡಲು ಮುಂದಾದಾಗ ಆತನ ಕಾಲಿಗೆ ಬಂದೂಕಿನಿಂದ ಶೂಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಗಾಯಾಳು ಆರೋಪಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಅರ್ಜುನ್ ಅವರಿಗೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಮನೆ ದರೋಡೆ: ವೃದ್ಧರನ್ನು ಕೂಡಿಹಾಕಿ ಹಲ್ಲೆಗೈದು ಕಾರಿನೊಂದಿಗೆ ಪರಾರಿ - Mangaluru Robbery Case