ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಬಳಿಕ ಆತನ ಮೊಬೈಲ್ ಅನ್ನು ಸುಮನಹಳ್ಳಿ ಬ್ರಿಡ್ಜ್ ಬಳಿಯ ರಾಜಕಾಲುವೆಯಲ್ಲಿ ಆರೋಪಿ ವಿನಯ್ ಬಿಸಾಕಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಮೊಬೈಲ್ ಬಿಸಾಕಿದ ಜಾಗಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕರೆತಂದು ಮಹಜರಿಗೆ ಒಳಪಡಿಸಿದ್ದಾರೆ.
ಸುಮನಹಳ್ಳಿಯ ಸತ್ವ ಅನುಗ್ರಹ ಲೇಔಟ್ ಬಳಿಯಿರುವ ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಶವ ಬಿಸಾಕಿದ್ದರು. ಆರೋಪಿ ವಿನಯ್, ರೇಣುಕಾಸ್ವಾಮಿ ಬಳಸುತ್ತಿದ್ದ ಮೊಬೈಲ್ ಅನ್ನು ಇದೇ ರಾಜಕಾಲುವೆಯಲ್ಲಿ ಎಸೆದಿರುವುದಾಗಿ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ. ಹೀಗಾಗಿ ಆರೋಪಿ ವಿನಯ್ ಅನ್ನು ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡ ಕರೆದುಕೊಂಡು ಮಹಜರಿಗೆ ಒಳಪಡಿಸಿದೆ.
ಸದ್ಯ ಬಿಬಿಎಂಪಿ ಪೌರಕಾರ್ಮಿಕರನ್ನ ಕರೆತಂದು ರಾಜಕಾಲುವೆಯಲ್ಲಿ ಶೋಧ ಕಾರ್ಯ ಕೆಲಸ ಮಾಡಿಸಲಾಗುತ್ತಿದೆ. ಮೊಬೈಲ್ ಬಿಸಾಕಿದ ಜಾಗದಿಂದ ಹಿಡಿದು 200 ಮೀಟರ್ವರೆಗೂ ಶೋಧ ನಡೆಸಲಾಗುತ್ತಿದೆ. ಒಂದು ವೇಳೆ ಮೃತನ ಮೊಬೈಲ್ ದೊರೆತರೆ ಕೊಲೆ ಪ್ರಕರಣಕ್ಕೆ ಮಹತ್ವದ ಸಾಕ್ಷಿಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ - Renukaswamy murder case