ಬೆಂಗಳೂರು: ಬೆನ್ನು ನೋವಿನ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಸೇರಿ ಏಳು ಮಂದಿ ಆರೋಪಿಗಳಿಗೆ ಇಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರ ಬಳಿಕ ಆರ್.ಆರ್.ನಗರದಲ್ಲಿರುವ ದರ್ಶನ್ ನಿವಾಸ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಬಿಜಿಎಸ್ ಆಸ್ಪತ್ರೆಯೆದುರು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ಗೆ ಸಾಮಾನ್ಯ ಜಾಮೀನು ದೊರೆಯುತ್ತಿದ್ದಂತೆ ಅಭಿಮಾನಿಗಳು ಬಿಜಿಎಸ್ ಆಸ್ಪತ್ರೆ ಹಾಗೂ ಆರ್.ಆರ್.ನಗರದಲ್ಲಿರುವ ದರ್ಶನ್ ನಿವಾಸದ ಬಳಿ ಬಂದು ಜೈಕಾರ ಕೂಗಿದ್ದರು. 'ಡಿ ಬಾಸ್, ಡಿ ಬಾಸ್' ಎಂದಿದ್ದರು. ಅಭಿಮಾನಿಗಳ ಜಮಾವಣೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಅಭಿಮಾನಿಗಳನ್ನು ಚದುರಿಸಿದ್ದಾರೆ. ಪಟಾಕಿ ಹಚ್ಚಿ ಓರ್ವ ಅಭಿಮಾನಿ ಪರಾರಿಯಾಗುತ್ತಿದ್ದಂತೆ ಪೊಲೀಸರು ಆತನನ್ನು ಚೇಸ್ ಮಾಡಿ ವಶಕ್ಕೆ ಪಡೆದುಕೊಂಡರು. ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಒಂದು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಮತ್ತೊಂದೆಡೆ, ದರ್ಶನ್ ನಿವಾಸದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದಂತೆ ಪೊಲೀಸರು ಮನೆ ಮುಂದಿನ ರಸ್ತೆಗೆ ಬ್ಯಾರಿಕೇಡ್ಗಳನ್ನು ಹಾಕಿ ಯಾರೂ ಬರದಂತೆ ಕ್ರಮ ಕೈಗೊಂಡು ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ.