ಬೆಂಗಳೂರು : ಬಿಟ್ ಕಾಯಿನ್ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಡಿವೈಎಸ್ಪಿ ಶ್ರೀಧರ್ ಪೂಜಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು 56ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ.
ಬಿಟ್ ಕಾಯಿನ್ ಅಕ್ರಮ ವರ್ಗಾವಣೆ ಆರೋಪ ಸಂಬಂಧ ಎಸ್ಐಟಿ ತಂಡ ಬಂಧಿಸಲು ತೆರಳಿದ್ದ ವೇಳೆ ಟೀಂ ಮೇಲೆ ಕಾರು ಹತ್ತಿಸಲು ಯತ್ನ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶ್ರೀಧರ್ ಪೂಜಾರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ವಾದ-ಪ್ರತಿವಾದ ಆಲಿಸಿದ ಬಳಿಕ ಅರ್ಜಿದಾರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ತಿರಸ್ಕೃತಗೊಳಿಸಿದೆ.
2020ರಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆಗ ಇನ್ಸ್ಪೆಕ್ಟರ್ಗಳಾಗಿದ್ದ ಶ್ರೀಧರ್ ಕೆ. ಪೂಜಾರ್, ಲಕ್ಷ್ಮಿಕಾಂತಯ್ಯ ಹಾಗೂ ಚಂದ್ರಾದರ್ ವಿರುದ್ಧ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಪ್ರಕರಣ ದಾಖಲಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಅಕ್ರಮವಾಗಿ ಬಂಧಿಸಿ, ಕ್ರಿಪ್ಟೊ ಕರೆನ್ಸಿ ವರ್ಗಾವಣೆ ಹಾಗೂ ಸಾಕ್ಷ್ಯನಾಶಪಡಿಸಿದ ಆರೋಪ ಇವರ ಮೇಲೆ ಕೇಳಿಬಂದಿತ್ತು.
ಕಳೆದ ತಿಂಗಳು 27ರಂದು ಸಿಟಿ ಸಿವಿಲ್ ಕೋರ್ಟ್ ಬಳಿ ಡಿವೈಎಸ್ಪಿ ಶ್ರೀಧರ್ ಪೂಜಾರ್ ಇರುವ ಬಗ್ಗೆ ಮಾಹಿತಿ ಅರಿತು ಬಂಧಿಸಲು ಹೋಗಿದ್ದ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್, ಎಎಸ್ಐ ಭಾಸ್ಕರ್ ನೇತೃತ್ವದ ತಂಡದ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದರು. ಈ ಸಂಬಂಧ ಎಎಸ್ಐ ಭಾಸ್ಕರ್ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗಾಗಿ ಡಿವೈಎಸ್ಪಿ ಶ್ರೀಧರ್ ಪೂಜಾರ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಅರ್ಜಿಯನ್ನ ವಜಾಗೊಳಿಸಿ ಆದೇಶಿಸಿದೆ.
ನಾಪತ್ತೆಯಾಗಿರುವ ಶ್ರೀಧರ್ ಪೂಜಾರ್ ವಿರುದ್ಧ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕಲಂ 82ರ ನಾಗರೀಕ ಅಪರಾಧ ಸಂಹಿತೆ ಕಾಯ್ದೆ (ಸಿಆರ್ಪಿಸಿ) ಘೋಷಿತ ಅಪರಾಧಿ ಎಂದು ಘೋಷಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೀಗಾಗಿ ಆರೋಪಿ ಡಿವೈಎಸ್ಪಿ ಇರುವಿಕೆ ಬಗ್ಗೆ ಮಾಹಿತಿ ನೀಡಿದಲ್ಲಿ ಅಥವಾ ಹಿಡಿದು ಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಆರೋಪಿ ಬಗ್ಗೆ ಮಾಹಿತಿ ಸಿಕ್ಕರೆ ದೂರವಾಣಿ ಸಂಖ್ಯೆ-080 22094485/ 22094498 ಹಾಗೂ ಮೊಬೈಲ್ ಸಂಖ್ಯೆ 9480800181, 944819915 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಸಿಐಡಿ ಪ್ರಕಟಣೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ : ಬಿಟ್ಕಾಯಿನ್ ಪ್ರಕರಣ: ಬಂಧಿತ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ಗಳು 6 ದಿನ ಸಿಐಡಿ ಕಸ್ಟಡಿಗೆ