ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮುಂಜಾಗ್ರತಾ ಕ್ರಮ ಕೈಗೊಂಡಿರುವ ನಗರ ಪೊಲೀಸರು, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಕ್ಲಬ್ - ಪಬ್ಗಳಲ್ಲಿ ನಿಯೋಜಿಸುವ ಬೌನ್ಸರ್ಗಳೊಂದಿಗೆ ಸಭೆ ನಡೆಸಿದ್ದಾರೆ.
ವರ್ಷಾಚರಣೆ ಕೇಂದ್ರ ಭಾಗವಾಗಿರುವ ಎಂ.ಜಿ.ರೋಡ್, ಬಿಗ್ರೇಡ್ ರೋಡ್, ಚರ್ಚ್ ಸ್ಟ್ರೀಟ್ ನಲ್ಲಿರುವ ಕ್ಲಬ್ - ಪಬ್ಗಳಲ್ಲಿನ ಬೌನ್ಸರ್ಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಡಿಸಿಪಿ ಶೇಖರ್ ಹೆಚ್.ಟಿ. ನಿರ್ದೇಶನ ನೀಡಿದ್ದಾರೆ. ಹೊಸ ವರ್ಷಾಚರಣೆಗೆ ಬಾರ್ ಅಂಡ್ ರೆಸ್ಟೋರೆಂಟ್ಗೆ ಬರುವ ಯುವತಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು. ಪಾರ್ಟಿ ಪ್ರಿಯರೊಂದಿಗಿನ ವರ್ತನೆ, ಕುಡಿದ ನಶೆಯಲ್ಲಿ ಸಾರ್ವಜನಿಕರು ಅಸಭ್ಯ ವರ್ತನೆ ತೋರಿದ್ದಲ್ಲಿ ಅವರನ್ನು ಪೊಲೀಸರಿಗೆ ಹೇಗೆ ಒಪ್ಪಿಸಬೇಕು ಎಂಬುದರ ಬಗ್ಗೆ ಸಭೆ ನಡೆಸಲಾಗಿದೆ.
ಅಲ್ಲದೆ, ಕೇಂದ್ರ ವಿಭಾಗದ ಪಬ್ ಬಾರ್ ರೆಸ್ಟೋರೆಂಟ್ ಮಾಲೀಕರು, ಪಾರ್ಟಿ ಹಾಲ್ ಹಾಗೂ ಖಾಸಗಿ ಹೋಟೆಲ್ ಮ್ಯಾನೇಜರ್ಗಳ ಜೊತೆಗೂ ಸಭೆ ನಡೆಸಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಾಲೋಚಿಸಲಾಗಿದೆ. ಹೊಸ ವರ್ಷಕ್ಕೆ ಮಾರ್ಗಸೂಚಿಗಳ ಪಾಲನೆ ಜೊತೆಗೆ ಹೇಗೆ ಪಾರ್ಟಿ ಆಯೋಜನೆ ಮಾಡಬೇಕೆಂಬ ಬಗ್ಗೆ ಹೇಳಲಾಗಿದೆ. ಅಲ್ಲದೇ, ಮಾಲೀಕರಿಂದ ಎದುರಿಸುವ ಸಮಸ್ಯೆ ಹಾಗೂ ಅವರ ಅಭಿಪ್ರಾಯ ಆಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ ಸಮೀಪಿಸಿರುವ ಹಿನ್ನೆಲೆ: ಕೊರಿಯರ್ ಕಂಪನಿ ಕಚೇರಿಗಳಲ್ಲಿ ಸಿಸಿಬಿ ತಪಾಸಣೆ
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಶೇಖರ್ ಹೆಚ್.ಟಿ., ''ಹೊಸ ವರ್ಷ ಹಿನ್ನೆಲೆಯಲ್ಲಿ ಬೌನ್ಸರ್ಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿದೆ. ಅನುಚಿತವಾಗಿ ವರ್ತಿಸುವ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗದೇ, ಸಮಯೋಚಿತವಾಗಿ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ತಿಳಿಸಲಾಗಿದೆ'' ಎಂದರು.
ಇದನ್ನೂ ಓದಿ: ಮಂಗಳೂರು: ಪಾರ್ಟ್ ಟೈಮ್ ಜಾಬ್ ಆಮಿಷವೊಡ್ಡಿ ವಂಚನೆ, ಮತ್ತಿಬ್ಬರು ಸೆರೆ