ಗದಗ: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ವರ ಕೊಲೆ ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ಕರೆ ತಂದ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಖಾಕಿ ಪಡೆ ಗುಂಡೇಟು ನೀಡಿದೆ. ಜಿಲ್ಲೆಯ ನರಗುಂದದ ಕುರ್ಲಗೇರಿ ಬಳಿ ಸೋಮವಾರ ಘಟನೆ ನಡೆದಿದೆ.
ಗದಗ ನಗರದ ದಾಸರ ಗಲ್ಲಿಯಲ್ಲಿ ಇತ್ತೀಚೆಗೆ ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರನ್ನು ಇತ್ತೀಚೆಗೆ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣದ ಎ2 ಆರೋಪಿ ಫಿರೋಜ್ ಹಾಗೂ ಇತರ ಆರೋಪಿಗಳನ್ನು ಸ್ಥಳ ಮಹಜರಿಗೆ ಪೊಲೀಸರು ಕರೆತಂದಿದ್ದರು. ಆಗ ಫಿರೋಜ್ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ.
ಮಹಜರು ವೇಳೆ ಗದಗ ಗ್ರಾಮಾಂತರ ಪಿಎಸ್ಐ ಶಿವಾನಂದ ಪಾಟೀಲ ಮೇಲೆ ಆರೋಪಿಯು ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾನೆ. ಆಗ ಪೊಲೀಸರು ಫಿರೋಜ್ ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ. ಘಟನೆಯಲ್ಲಿ ಪಿಎಸ್ಐ ಪಾಟೀಲ ಅವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡೇಟಿನಿಂದ ಗಾಯಗೊಂಡ ಫಿರೋಜ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏಪ್ರಿಲ್ 19 ರಂದು ಬೆಳಗಿನಜಾವ ಗದಗ ನಗರದ ದಾಸರ ಗಲ್ಲಿಯಲ್ಲಿ ನಡೆದಿದ್ದ ಈ ಘಟನೆ ನಗರವನ್ನು ಬೆಚ್ಚಿಬೀಳಿಸಿತ್ತು. ಆಸ್ತಿ ಮಾರಾಟ ವಿಚಾರವಾಗಿ ಕಲಹ ಉಂಟಾಗಿ ಮನೆಯ ಮಗನೇ ತನ್ನ ತಂದೆ ಹಾಗೂ ಮಲತಾಯಿ ಕೊಲೆಗೆ ಸುಪಾರಿ ನೀಡಿರುವುದು ತನಿಖೆಯಲ್ಲಿ ಬಯಲಾಗಿತ್ತು. ಹಂತಕರು ತಪ್ಪಾಗಿ ಭಾವಿಸಿ, ಮನೆಗೆ ಬಂದಿದ್ದ ಸಂಬಂಧಿಗಳು ಮತ್ತು ಕಿರಿಯ ಸಹೋದರನನ್ನು ಕೊಲೆ ಮಾಡಿದ್ದರು.