ಮಂಗಳೂರು: ಉದ್ಯಮಿ ಮುಮ್ತಾಜ್ ಅಲಿ ಅವರನ್ನು ಖಾಸಗಿ ವಿಡಿಯೋ ಇಟ್ಟುಕೊಂಡು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿ ಅವರ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನಲ್ಲಿ ಉಲ್ಲೇಖಿಸಲಾದ 6 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು.
ಮುಮ್ತಾಜ್ ಅವರನ್ನು ರೆಹಮತ್ ಎಂಬ ಮಹಿಳೆ, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯಬ್, ಸಿರಾಜ್ ಎಂಬವರು ಖಾಸಗಿ ವಿಡಿಯೋ ತೋರಿಸಿ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಮುಮ್ತಾಜ್ ಅಲಿ ಅವರು ಫ್ಯಾಮಿಲಿ ಗ್ರೂಪ್ಗೆ ಕಳುಹಿಸಿದ ವಾಯ್ಸ್ ಮೆಸೇಜ್ನಲ್ಲಿಯೂ ಕೆಲವು ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರು ವಿದೇಶಕ್ಕೆ ಹೋಗದಂತೆ ಎಲ್ಒಸಿ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು.
ಮುಮ್ತಾಜ್ ಅಲಿ ಅವರ ಸಹೋದರ ಹೈದರ್ ಅಲಿ ನೀಡಿದ ದೂರಿನಲ್ಲಿ, ತನ್ನ ಸಹೋದರನಿಗೆ 2024ನೇ ಜುಲೈ ತಿಂಗಳಿನಿಂದ ಇಲ್ಲಿಯವರೆಗೆ ನಿರಂತರ ಬೆದರಿಸಿ ಲಕ್ಷಾಂತರ ರೂ. ಹಣ ಕಿತ್ತುಕೊಂಡಿದ್ದಾರೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟ ಆರೋಪಿಗಳಾದ ರೆಹಮತ್ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯಬ್, ಸಿರಾಜ್ (ಅಬ್ದುಲ್ ಸತ್ತಾರ ಕಾರು ಚಾಲಕ) ಇವರುಗಳ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ಆರೋಪಿಗಳು ಮುಮ್ತಾಜ್ ಅಲಿಯಿಂದ ಈಗಾಗಲೇ 50 ಲಕ್ಷ ರೂ.ಕ್ಕೂ ಅಧಿಕ ಮೊತ್ತ ಪಡೆದಿದ್ದಾರೆ. ಇದರಲ್ಲಿ 25 ಲಕ್ಷ ರೂ.ನ ಚೆಕ್ ಅನ್ನೂ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ - Moidin Bava Brother Missing
ಮೃತ ಮುಮ್ತಾಜ್ ಅಲಿ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯ್ದಿನ್ ಬಾವ ಮತ್ತು ಮಾಜಿ MLC ಆಗಿರುವ ಬಿ.ಎಂ.ಫಾರೂಕ್ ಅವರ ಸಹೋದರ. ಇವರು ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದರು. ಮಂಗಳೂರಿನ ಕೂಳೂರು ಫಲ್ಗುಣಿ ನದಿ ಸೇತುವೆ ಮೇಲೆ ಅವರ ಕಾರು ನಿನ್ನೆ ಪತ್ತೆಯಾಗಿತ್ತು. ಇದರಿಂದ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಶಂಕೆಯಿಂದ ಭಾನುವಾರ ಬೆಳಗ್ಗೆಯಿಂದ ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಸ್ಥಳೀಯ ಮುಳುಗು ತಜ್ಞರಿಂದ ಶೋಧ ಕಾರ್ಯಾಚರಣೆ ನಡೆಸಿದ್ದು, ಅವರ ಮೃತದೇಹವನ್ನು ಪತ್ತೆ ಮಾಡಿದ್ದಾರೆ.