ಬೆಂಗಳೂರು: ರೈಲಿನ ಮೂಲಕ ಒಡಿಶಾದಿಂದ ಮಾದಕ ಪದಾರ್ಥಗಳನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಬದ್ರುದ್ದೀನ್ ಬಂಧಿತ ಆರೋಪಿ. ಆತನ ಬಳಿಯಿದ್ದ 1 ಲಕ್ಷ ರೂ ಮೌಲ್ಯದ 5 ಕೆ.ಜಿ 20 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದೀನ್‌ಗೆ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಅಲ್ಲದೇ ಸಹೋದರಿಯ ಮದುವೆ ಮಾಡುವ ಜವಾಬ್ದಾರಿ ಸಹ ಬದ್ರುದ್ದೀನ್‌ನ ಮೇಲಿತ್ತು. ಮಾದಕ ಪದಾರ್ಥಗಳನ್ನ ಮಾರಾಟ ಮಾಡಿದರೆ ಹೆಚ್ಚು ಆದಾಯ ಗಳಿಸಬಹುದೆಂದು ಎಂದು ತಿಳಿದ ಬದ್ರುದ್ದೀನ್, ಸರಬರಾಜುದಾರರ ನಂಬರ್ ಪಡೆದು ಒಡಿಶಾಗೆ ತೆರಳಿದ್ದ. ಸೆಪ್ಟೆಂಬರ್ 2ರಂದು ದುರೊಂತೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿನ ಎಸ್ಎಂವಿಟಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಆರೋಪಿಯನ್ನ ಗಾಂಜಾವಿದ್ದ ಬ್ಯಾಗ್ ಸಮೇತ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಸಾರ್ವಜನಿಕರು, ಕಾಲೇಜು ವಿಧ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಸಲುವಾಗಿ ಗಾಂಜಾವನ್ನು ತಂದಿರುವುದಾಗಿ ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.