ಹುಬ್ಬಳ್ಳಿ: ಕರ್ನಾಟಕದಿಂದ 27 ಜನರನ್ನು ಕಳಿಸಿದ್ದೆವು. ಇಬ್ಬರು ರಾಜ್ಯಸಭಾ ಸದಸ್ಯರಿದ್ದರು. ಅದ್ರಲ್ಲಿ ಒಬ್ಬರು ಹಣಕಾಸು ಸಚಿವರಿದ್ದರು. ಈರುಳ್ಳಿ ಬೆಳೆ ಹೆಚ್ಚಾದರೆ ನಾನು ಅದನ್ನು ತಿನ್ನಲ್ಲ ಅಂತಾರೆ. 5 ವರ್ಷಗಳ ಕರ್ನಾಟಕಕ್ಕೆ ಏನು ಕೆಲಸ ಮಾಡಿದರು?. ಕರ್ನಾಟಕಕ್ಕೆ ಮಹಾಪ್ರಭುಗಳು (ಪ್ರಧಾನಿ ಮೋದಿ) ಬಂದಾಗಲೆಲ್ಲ, ಮೈಸೂರಿನವರು ಓಡಾಡುತ್ತಾರೆ. ಬೆಂಗಳೂರಿಗೆ ಬಂದರೆ, ರಥಕ್ಕೆ ಹೂ ಹಾಕಲು ಕಲ್ಯಾಣ ಮಂಪಟಗಳನ್ನು ಬುಕ್ ಮಾಡುತ್ತಾರೆ. ಮಹಾಪ್ರಭುಗಳಿಗೆ ತಮ್ಮ ದೆಹಲಿ ಆಸ್ಥಾನಕ್ಕೆ ನಮ್ಮ ಪ್ರತಿನಿಧಿಗಳಲ್ಲ. ಅವರಿಗೆ ಬೇಕಾಗಿರುವುದು ತಮ್ಮನ್ನು ಹೊಗಳುವ ಹೊಗಳು ಭಟ್ಟರು ಮಾತ್ರ ಎಂದು ನಟ ಪ್ರಕಾಶ ರಾಜ್ ಟೀಕಿಸಿದರು.
ನಗರದಲ್ಲಿಂದು ಆಯೋಜಿಸಿದ್ದ 'ಸಂವಿಧಾನ ಸುರಕ್ಷಾ ಸಮಿತಿ ಮತ್ತು ಎದ್ದೇಳು ಕರ್ನಾಟಕ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಮಹಾಪ್ರಭುಗಳು ಎಲ್ಲೆಲ್ಲಿ ಹೋಗುತ್ತಾರೋ, ನಾನು ಅಲ್ಲಿಗೆ ಹೋಗುತ್ತೇನೆ. ಇವತ್ತಿನ ಚುನಾವಣೆ ಯಾವುದರ ಮೇಲೆ ನಡೆಯಬೇಕು?, 10 ವರ್ಷದಲ್ಲಿ ಏನು ಕಿಸಿದೆಯಾಪ್ಪ ಎಂಬುವುದು ಈ ಚುನಾವಣೆಯಲ್ಲಿ ನಾವು ಕೇಳಬೇಕಿದೆ. 10 ವರ್ಷಗಳ ಆಳ್ವಿಕೆ ನಂತರ ನಾವು, ಆಳುವ ಸರ್ಕಾರವನ್ನೇ ನಾವು ಪ್ರಶ್ನೆ ಮಾಡಿರೋದು. ಬೇರೆಯವರನ್ನು ಯಾಕೆ ಪ್ರಶ್ನಿಸಿಬೇಕು. ಅವರು (ಹಿಂದೆ ಆಡಳಿತ ಮಾಡಿದವರು) ಸರಿಯಿಲ್ಲ ಎಂದು ಅವರನ್ನು ಕೆಳಗಿಳಿಸಿದ್ದು'' ಎಂದು ಹೇಳಿದರು.
''ಪ್ರತಿಪಕ್ಷವು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ. ಆಗ ಮಹಾಪ್ರಭುಗಳು ತಾವೊಂದು ಪ್ರಣಾಳಿಕೆ ಬಿಡುಗಡೆ ಮಾಡಿ, 10 ವರ್ಷದಲ್ಲಿ ಇದನ್ನೆಲ್ಲ ಸಾಧಿಸಿದ್ದೇನೆ. ಮುಂದೆ ಇಂತಹದೆನ್ನಲ್ಲ ಸಾಧಿಸುತ್ತೇನೆ ಎಂದು ಹೇಳಬೇಕು. ಇದನ್ನು ಹೊರತು, ಪ್ರತಿಪಕ್ಷದ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಅಂತಾ ಹೇಳುತ್ತಾರೆ. ತಲೆಯಲ್ಲಿ ಅಂತಹ ದುರಹಂಕಾರ, ಆ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ಇದೆಯೇ?, ಒಬ್ಬ ಮಹಾಪ್ರಭು ಆಡುವ ಮಾತುಗಳಾವು?, ನಾವು ಕೊಡುವುದಕ್ಕಿಂತ ಮೊದಲೇ ಅಬ್ ಕಿ ಬಾರ್ 400 ಪಾರ್ ಅಂತಾ ಹೇಳುತ್ತಾರೆ. 400 ಪಾರ್ ಏನೂ ಆಗಲ್ಲ. ತಮಿಳುನಾಡಿನಲ್ಲಿ ಎರಡು ಶೂನ್ಯ, ಕೇರಳದಲ್ಲಿ ಎರಡು ಶೂನ್ಯ ಬರುತ್ತದೆ. ನಾಲ್ಕು ಶೂನ್ಯಗಳನ್ನಿಟ್ಟುಕೊಂಡು ಓಡಾಡಿ'' ಎಂದರು.
''ನಿನ್ನ ಪಕ್ಷ ಮಾಡಿರುವ ಕೆಲಸಕ್ಕೆ ಮತ ಬರುತ್ತದೆ ಎಂಬ ನಂಬಿಕೆ ಇದ್ದರೆ, ಕಳ್ಳರು, ದರೋಡೆಕೋರರನ್ನು ನಿನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದೀಯಾ?, ಭ್ರಷ್ಟಾಚಾರ ತೆಗೆಯುತ್ತೇನೆ, ಭ್ರಷ್ಟರನ್ನು ಜೈಲಿಗೆ ಹಾಕುತ್ತೇನೆ ಎಂದು ಹೇಳಿದೆ. ಆದರೆ, ಬಿಜೆಪಿಗೆ ಯಾಕೆ ಸೇರಿಕೊಳ್ಳುತ್ತಿದೀಯಾ. ನಿನ್ನ ಪಕ್ಷವೇನಾದರೂ ಜೈಲೇ'' ಎಂದು ಲೇವಡಿ ಮಾಡಿದರು.
''ನಾರಿ ಶಕ್ತಿ, ಬೇಟಿ ಪಡಾವೋ, ಬೇಟಿ ಬಚಾವೋ ಅಂತೀರಿ. ಒಲಿಂಪಿಕ್ ಪದಕ ಗೆದ್ದ ಬಂದ ಹೆಣ್ಣು ಮಕ್ಕಳಿಂದ ಸೆಲ್ಪಿ ತೆಗೆದುಕೊಳ್ಳಲು ಆಗುತ್ತದೆ. ಆದರೆ, ಅದೇ ಹೆಣ್ಣು ಮಕ್ಕಳು ನಮ್ಮ ಪಕ್ಷದ ಎಂಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ರಸ್ತೆಗೆ ಬಂದರೆ, ಹೋಗಿ ಮಾತನಾಡಿಸಿಕೋ ಆಗಲ್ವಾ ನಿನಗೆ?., ಅವರ (ಮಹಿಳೆಯರು) ಮೇಲೆ ಕೇಸ್ಗಳನ್ನು ಹಾಕ್ತೀಯಾ. ಅವರು ಕೋರ್ಟ್ಗೆ ಹೋಗಿ ಹೋರಾಟ ಮಾಡಬೇಕು. ಬ್ರಿಜ್ ಭೂಷಣಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ, ನಿನ್ನ ಪಕ್ಷದಿಂದ ಅವನನ್ನು ತೆಗೆಯಲ್ಲ. ಯಾಕೆಂದರೆ, ನಿನಗೆ ವೋಟ್ ಬ್ಯಾಂಕ್ ಬೇಕು'' ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ತಪ್ಪು ಸಾಬೀತಾದರೆ ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆಯಾಗಲಿ: ನಟ ಚೇತನ್ - Hassan Pen Drive Case