ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್. ಜೆ. ಭಂಡಾರಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದು, ಪಿಲಿಕುಳವನ್ನು 'ಸೈಲೆಂಟ್ ಝೋನ್' ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಮೂಲಕ ಪಿಲಿಕುಳ ಕಂಬಳಕ್ಕೆ ಕಂಟಕ ಎದುರಾಗಿದೆ.
ಪಿಲಿಕುಳ ನಿಸರ್ಗಧಾಮವನ್ನು ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ನಿರ್ಮಿಸಲಾಗಿದೆ. ಇಲ್ಲಿ 1,250 ವನ್ಯಜೀವಿಗಳಿವೆ. ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಸಂಶೋಧನೆ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಪ್ರೋತ್ಸಾಹಿಸಲು ಈ ವನ್ಯಮೃಗಗಳನ್ನು ರಕ್ಷಿಸಲಾಗುತ್ತಿದೆ.
ಪಿಲಿಕುಳಕ್ಕೆ ಭೇಟಿ ನೀಡುವವರಿಗೆ ಮಾಲಿನ್ಯ ಮುಕ್ತ (ಗಾಳಿ, ಶಬ್ಧ, ನೀರು, ಭೂಮಿ) ಪರಿಸರ ಒದಗಿಸುವುದು ಪ್ರಾಧಿಕಾರದ ಪ್ರಾಥಮಿಕ ಜವಾಬ್ದಾರಿ. ಅಲ್ಲದೆ ಸಂರಕ್ಷಣೆಯಲ್ಲಿರುವ ವನ್ಯ ಜೀವಿಗಳಿಗೆ ಶಬ್ಧ ಮಾಲಿನ್ಯ ಮುಕ್ತ ಪರಿಸರವನ್ನು ಒದಗಿಸುವುದು ಅತೀ ಮುಖ್ಯ. ಆದ್ದರಿಂದ ಪಿಲಿಕುಳ ಮತ್ತು ಸುತ್ತಮುತ್ತಲಿನ 500 ಮೀ. ಪ್ರದೇಶವನ್ನು ಪರಿಸರ ಸಂರಕ್ಷಣಾ ಕಾಯ್ದೆ 1986ರನ್ವಯ 'ಸೈಲೆಂಟ್ ಝೋನ್' ಎಂದು ಘೋಷಿಸಲು ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ನವೆಂಬರ್ 17, 18ರಂದು ಪಿಲಿಕುಳದಲ್ಲಿ ಕಂಬಳ ನಡೆಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಕಂಬಳದ ವೇಳೆ ಕೊಂಬು, ವಾದ್ಯ, ಸಮ್ಮೇಳಗಳ ಸ್ವರ ತಾರಕಕ್ಕೇರುತ್ತದೆ. ಅಲ್ಲದೆ, ನಿರಂತರವಾಗಿ ಮೈಕ್‌ಗಳಲ್ಲಿ ಕಂಬಳ ರೆಫ್ರಿಗಳು ಅನೌನ್ಸ್ ಮಾಡುತ್ತಲೇ ಇರುತ್ತಾರೆ. ಕೋಣಗಳನ್ನು ತರುವ ವಾಹನಗಳ ಕಿರಿಕಿರಿ, ವಾಯುಮಾಲಿನ್ಯದಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪಿಲಿಕುಳದಲ್ಲಿ ಜಿಲ್ಲಾಡಳಿತ ಕಂಬಳ ನಡೆಸಿದರೆ ಪ್ರಾಣಿಗಳಿಗೆ ಕಿರಿಕಿರಿ ಉಂಟಾಗುವುದು ಎಂಬ ಅಭಿಪ್ರಾಯ ಈ ಪತ್ರದ ಹಿಂದಿದೆ. ಆದ್ದರಿಂದ 13 ವರ್ಷಗಳ ಬಳಿಕ ಜಿಲ್ಲಾಡಳಿತದಿಂದ ನಡೆಯುವ ಪಿಲಿಕುಳ ಕಂಬಳಕ್ಕೆ ಮತ್ತೊಂದು ವಿಘ್ನ ಎದುರಾಗುವ ಲಕ್ಷಣ ಗೋಚರಿಸಿದೆ.
ಪತ್ರದ ವಿವರ: ಪಿಲಿಕುಳ ನಿಸರ್ಗಧಾಮವು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುವ ಪರಿಸರ ಶಿಕ್ಷಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಾಗಿದೆ. ವಿವಿಧ ವೈಶಿಷ್ಟ್ಯಗಳೊಂದಿಗೆ ಸಮಗ್ರ ಥೀಮ್ ಪಾರ್ಕ್ ಆಗಿದೆ. ಸಂಸ್ಕೃತಿ ಮತ್ತು ವೈಜ್ಞಾನಿಕ ಆಸಕ್ತಿಯ ಅನೇಕ ಆಕರ್ಷಣೆಗಳನ್ನು ಹೊಂದಿದೆ. ಪಿಲಿಕುಳ ಜೈವಿಕ ಉದ್ಯಾನವನ (ಮೃಗಾಲಯ) ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮನರಂಜನೆಗಾಗಿ ಪಿಲಿಕುಳಕ್ಕೆ ಭೇಟಿ ನೀಡುತ್ತಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ಸುಮಾರು 1,250 ವನ್ಯಜೀವಿಗಳನ್ನು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಇರಿಸಲಾಗಿದ್ದು, ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಸಂಶೋಧನೆ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿರುತ್ತದೆ. ರಾಜ್ಯ ನಿಧಿಯಿಲ್ಲದೆ ಸಾರ್ವಜನಿಕ ಹಣಕಾಸಿನ ನೆರವಿನೊಂದಿಗೆ ಮೃಗಾಲಯವನ್ನು ಪ್ರಾರಂಭಿಸಿ ಬೃಹತ್ ಮೃಗಾಲಯವಾಗಿ ಅಭಿವೃದ್ಧಿಪಡಿಸಿ ನಿರ್ವಹಿಸಲಾಗಿದೆ.
C.ZAಯು ವಶುವೈದ್ಯಕೀಯ ಆರೋಗ್ಯ ಸೌಲಭ್ಯ, ಕೆಲವು ಪ್ರಾಣಿಗಳ ಅವರಣ ಇತ್ಯಾದಿಗಳಿಗೆ ಅರ್ಥಿಕವಾಗಿ ಸಹಾಯ ಮಾಡಿದೆ. ಪಿಲಿಕುಳಕ್ಕೆ ಭೇಟಿ ನೀಡುವವರಿಗೆ ಮಾಲಿನ್ಯ ಮುಕ್ತ (ಗಾಳಿ, ಶಬ್ಧ, ನೀರು, ಭೂಮಿ) ಪರಿಸರವನ್ನು ಒದಗಿಸುವುದು ಪ್ರಾಧಿಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಅಲ್ಲದೆ ಸಂರಕ್ಷಣೆಯಲ್ಲಿರುವ ವನ್ಯ ಜೀವಿಗಳಿಗೆ ಶಬ್ಧ ಮಾಲಿನ್ಯ ಮುಕ್ತ ಪರಿಸರವನ್ನು ಒದಗಿಸುವುದು ಅತೀ ಮುಖ್ಯ. ಅದ್ದರಿಂದ ಪಿಲಿಕುಳ ಮತ್ತು ಸುತ್ತಮುತ್ತಲಿನ 500 ಮೀಟರ್ ಪ್ರದೇಶವನ್ನು ಪರಿಸರ ಸಂರಕ್ಷಣಾ ಕಾಯ್ದೆ 1986ರ ಪ್ರಕಾರ 'ಸೈಲೆಂಟ್ ಝೋನ್ ಎಂದು ಘೋಷಿಸಲು ವಿನಂತಿಸುತ್ತೇನೆ ಎಂದು ನಿರ್ದೇಶಕ ಹೆಚ್.ಜೆ. ಭಂಡಾರಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಆಟೋ ಮೇಲಕ್ಕೆತ್ತಿ ತಾಯಿಯ ರಕ್ಷಿಸಿದ ಬಾಲಕಿ ವೈಭವಿಗೆ ಡಿಸಿ ಸನ್ಮಾನ - DC Honors Brave Girl