ಬಂಟ್ವಾಳ (ದಕ್ಷಿಣ ಕನ್ನಡ): ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಜ್ವರದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಯತೀಶ್ (52) ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ.
ಅತಿಯಾದ ಜ್ವರದಿಂದ ಬಳಲುತ್ತಿದ್ದ ಯತೀಶ್ ಅವರು ಜುಲೈ 10ರಂದು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚೇತರಿಕೆ ಕಂಡುಬಾರದ ಕಾರಣ ಅದೇ ದಿನ ಸಂಜೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಯತೀಶ್ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಶಂಭೂರು ಗರಡಿ ನಿವಾಸಿಯಾಗಿರುವ ಯತೀಶ್ ಅವರು ಇತ್ತೀಚೆಗೆ ಪತ್ನಿಯ ತವರೂರು ಪುತ್ತೂರಿನಲ್ಲಿ ಮನೆ ಮಾಡಿ ಅಲ್ಲಿ ವಾಸವಾಗಿದ್ದರು. ಭಾರತ್ ಬೀಡಿ ಕಂಪನಿಯ ಬಿಸಿರೋಡಿನ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೃತ ಯತೀಶ್ ಉತ್ತಮ ಗುಣನಡತೆಯಿಂದ ಶಂಭೂರು ಗ್ರಾಮದಲ್ಲಿ ಚಿರಪರಿಚಿತರಾಗಿದ್ದರು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಗೆಳೆಯರನ್ನು ಅಗಲಿದ್ದಾರೆ.
ಸಿಪಿಐಎಂ ಮುಖಂಡರಿಂದ ಹೋರಾಟದ ಎಚ್ಚರಿಕೆ : ''ಮಳೆಗಾಲದಲ್ಲಿ ಕೊಳಚೆ ಪ್ರದೇಶದ ಸ್ವಚ್ಛತೆ, ವೈರಸ್ ಉತ್ಪತ್ತಿ ಆಗುವ ಪ್ರದೇಶಗಳ ಗುರುತಿಸಿ ಕ್ರಿಮಿನಾಶಕ ಸಿಂಪಡಿಸುವುದು ಸೇರಿದಂತೆ ಜನರ ಆರೋಗ್ಯ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಯಾವುದೇ ರೋಗ ಹರಡದಂತೆ ರಕ್ಷಣೆ ಒದಗಿಸಬೇಕಾದ್ದು ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯವಾಗಿದೆ. ಆದರೆ ಆರೋಗ್ಯ ಇಲಾಖೆ ಏನು ಮಾಡುತ್ತಿದೆ? ಜನ ಡೆಂಗ್ಯೂ ಮೊದಲಾದ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ'' ಎಂದು ಸಿಪಿಐಎಂ ಮುಖಂಡ ಬಿ.ಎಂ.ಭಟ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
''ದಕ್ಷಿಣ ಕನ್ನಡ ಜಿಲ್ಲೆಗೆ 8 ಜನ ಶಾಸಕರಿದ್ದರೂ ಜನರ ಆರೋಗ್ಯ ಬಗ್ಗೆ ಯಾವುದೇ ಕಾಳಜಿ ಇಲ್ಲದವರಾಗಿದ್ದಾರೆ. ಲಾಭದಾಯಕ ದೃಷ್ಟಿಕೋನದ ಮನೋಭಾವ ಹೊಂದಿರುವ ಸರ್ಕಾರ, ಜನಪ್ರತಿನಿಧಿಗಳು ಇಂದು ಸೇವಾ ಮನೋಭಾವವನ್ನು ಕಳಚಿಕೊಂಡಿದ್ದಾರೆಯೇ? ಜನರ ಆರೋಗ್ಯ ರಕ್ಷಣೆಯಲ್ಲೂ ಲಾಭದ ಲೆಕ್ಕಾಚಾರ ನೋಡುವುದು ಜನರ ಜೀವದ ಮೇಲೆ ಆಟ ಆಡಿದಂತಾದೀತು. ಈ ಬಗ್ಗೆ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಂಡು ಔಷಧಿ ಸಿಂಪಡಿಕೆಯೂ ಸೇರಿದಂತೆ ರೋಗ ಉತ್ಪತ್ತಿ ಮತ್ತು ಹರಡುವಿಕೆಯನ್ನು ತಡೆಯಲು ಮುಂದಾಗದಿದ್ದರೆ ನಾವು ಜಿಲ್ಲಾ ಆರೋಗ್ಯ ಇಲಾಖೆಯ ಎದುರು ಸಮರ ಧೀರ ಹೋರಾಟ ನಡೆಸಬೇಕಾಗುತ್ತದೆ'' ಎಂದು ಬಿ.ಎಂ.ಭಟ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 424 ಮಂದಿಗೆ ಡೆಂಗ್ಯೂ ಪ್ರಕರಣ ಪತ್ತೆ: 119 ಸಕ್ರಿಯ ಪ್ರಕರಣಗಳು - New Dengue Cases