ಬೆಂಗಳೂರು: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿ ರಚನೆ ಮಾಡಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಬಸವಂತಪ್ಪ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿ ರಚನೆ ಮಾಡುವ ಪ್ರಸ್ತಾಪ ಆರ್ಥಿಕ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ಆಯಾ ಜಿಲ್ಲೆ ಮೂಲಕ ಹೊರಗುತ್ತಿಗೆ ನೌಕರರಿಗೆ ನೇಮಕ ಮಾಡಲು ಚಾಲನೆ ದೊರೆಯಲಿದೆ. ರಾಜ್ಯದಲ್ಲಿ ವಿವಿಧ ಇಲಾಖೆಗಳ ಮೂಲಕ 54 ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. 405 ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ಲೈಸೆನ್ಸ್ ನೀಡಲಾಗಿದೆ ಎಂದು ಹೇಳಿದರು.
50 ಜನರ ಹೊರಗುತ್ತಿಗೆ ವೇತನ ಪಡೆದು 25 ಜನರಿಂದ ಕೆಲಸ ಮಾಡುತ್ತಿರುವುದು ಸೇರಿದಂತೆ ಹೊರಗುತ್ತಿಗೆ ನೌಕರರ ವಿಚಾರದಲ್ಲಿ ಹಲವು ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಆ ಕಾರಣಕ್ಕಾಗಿ ಈ ಹೊಸ ಪದ್ಧತಿಯನ್ನು ಜಾರಿ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಹೊರಗುತ್ತಿಗೆ ಏಜೆನ್ಸಿಗಳಿಗೆ ಕಡಿವಾಣ ಬೀಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಶಾಸಕ ಬಸವಂತಪ್ಪ, ಶಿವಲಿಂಗೇಗೌಡ, ನಾರಾಯಣಸ್ವಾಮಿ, ಸಿದ್ದು ಸವದಿ ಸೇರಿದಂತೆ ಮೊದಲಾದವರು ಮಾತನಾಡಿ, ಸರ್ಕಾರದಿಂದ 18 ಸಾವಿರ ವೇತನ ಪಡೆದರೂ ಹೊರಗುತ್ತಿಗೆ ನೌಕರರಿಗೆ ಅಷ್ಟೂ ಪ್ರಮಾಣದಲ್ಲಿ ವೇತನ ನೀಡುವುದಿಲ್ಲ. ಕಡಿಮೆ ವೇತನ ನೀಡುತ್ತಿದ್ದಾರೆ. ಹೊರಗುತ್ತಿಗೆ ನೌಕರರ ಹೆಸರಿನಲ್ಲಿ ನಡೆಯುವ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಹಣ ಪಾವತಿ ಮಾಡುವ ಪದ್ಧತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಉತ್ತೇಜನ: ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಪ್ರಶ್ನೆಗೆ ಉತ್ತರಿಸಿದರು.
37 ಹಾಸ್ಟೆಲ್ ಕಟ್ಟಡಗಳಿಗೆ ಟೆಂಡರ್ ಕರೆಯಲಾಗಿದೆ. ಸ್ಥಳಾವಕಾಶ ಇರುವ ಕಡೆಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸುವ ಪ್ರಯತ್ನ ಮಾಡಲಾಗುತ್ತಿದೆ. ನವೋದಯ ಮಾದರಿ ಶಾಲೆಗಳ ನಿರ್ಮಾಣಕ್ಕೆ 75 ಕೋಟಿ ರೂ., ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆ ಮೂಲಸೌಕರ್ಯಕ್ಕೆ 110 ಲಕ್ಷ ರೂ. ಅನುದಾನವನ್ನು ಒದಗಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸುರೇಶ್ ಬಾಬು, ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡಲು ಪ್ರಬುದ್ಧ ಯೋಜನೆ ರದ್ದು ಮಾಡಲಾಗಿದೆ. ವಿದೇಶದಲ್ಲಿ ಪಿಹೆಚ್ ಡಿ ಮಾಡಲು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪೋಷಕರು ಕಿಡ್ನಿ ಮಾರಿ ಓದಿಸಲು ಹಣ ಒದಗಿಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಗಮನ ಸೆಳೆದರು.
ಇದನ್ನೂ ಓದಿ: ವಸತಿ ಶಾಲೆಗಳ ಶಿಕ್ಷಣ ಕಳಪೆ, ವಿದ್ಯಾರ್ಥಿಗಳಿಗೆ ಸುರಕ್ಷತೆ ಇಲ್ಲ, ಉಪನಿರ್ದೇಶಕರೇ ಗುತ್ತಿಗೆದಾರರು: ಪಕ್ಷಾತೀತವಾಗಿ ಶಾಸಕರ ಧ್ವನಿ