ಮೈಸೂರು : ವಿಶ್ವ ವಿಖ್ಯಾತ ಜಂಬೂಸವಾರಿ ಮೆರವಣಿಗೆಯನ್ನು ಹತ್ತಿರದಿಂದ ನೋಡಬೇಕು ಎನ್ನುವ ಹಂಬಲದಿಂದ, ಬಿಗಿ ಸಂಚಾರದ ನಡುವೆ ಅರಮನೆ ಬಳಿ ಧಾವಿಸಿದ ಸಾರ್ವಜನಿಕರು ಹಾಗೂ ಪ್ರವಾಸಿಗರು ಅರಮನೆ ಪ್ರವೇಶದ ಗೇಟ್‌ಗಳ ಸರಿಯಾದ ಮಾಹಿತಿ ತಿಳಿಯದೇ ಅತ್ತಿಂದಿತ್ತ ಅಲೆದಾಡಿದರು.
ಬೆಳಗ್ಗೆ 11 ಗಂಟೆಯಿಂದಲೇ ಅರಮನೆ ಸುತ್ತ ಇರುವ ರಸ್ತೆಗಳ ಬಳಿ ಟಿಕೆಟ್‌ಗಳನ್ನು ಹಿಡಿದು ಜಮಾಯಿಸಿದ ಜನರು, ಅರಮನೆಗೆ ಹೋಗಲು ಗೇಟ್‌ಗಳ ಮಾಹಿತಿ ಪಡೆದು ಒಳಗೆ ಪ್ರವೇಶ ಪಡೆಯಲು ಪರದಾಡಿದರು.

ಅರಮನೆ ಹಾಗೂ ಜಂಬೂಸವಾರಿ ಮೆರವಣಿಗೆ ಸಾಗುವ ರಸ್ತೆಗಳ ಸಂಪರ್ಕಿಸುವ ಇತರೆ ರಸ್ತೆಗಳ ಸಂಪರ್ಕವನ್ನು ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್ ಮಾಡಿದ್ದರಿಂದ, ಬೈಕ್, ಆಟೋ, ಕಾರು, ಇತರೆ ವಾಹನ ಸವಾರರು ಸಂಚಾರ ಮಾಡಲು ಪರದಾಡಿದರು.

ಚಾಮರಾಜ ಜೋಡಿ ರಸ್ತೆ, ಅಗ್ರಹಾರ ರಸ್ತೆ, ಗನ್‌ಹೌಸ್ ವೃತ್ತ, ಹಾರ್ಡಿಂಗ್ ವೃತ್ತದ ರಸ್ತೆ, ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಹಲವು ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ವಾಹನ ಸವಾರರು ವಾಹನ ಚಾಲನೆ ಮಾಡಲು ಪರದಾಡಿ, ಗಂಟೆಗಟ್ಟಲೆ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪೊಲೀಸರೊಂದಿಗೆ ಮಾತಿನ ಚಕಮಕಿ : ಅರಮನೆ ಪ್ರವೇಶ ಪಡೆಯಲು ಕೆಲವರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಕೆಲವರು ಪಾಸ್ಗಳು ಇಲ್ಲದೇ ಹೋಗಲು ಯತ್ನಿಸಿದಾಗ ಪೊಲೀಸರು ತಮ್ಮದೇ ಭಾಷೆಯಲ್ಲಿ ಬುದ್ಧಿ ಹೇಳಿ ಕಳುಹಿಸಿದರು.
ಅರಮನೆ ರಸ್ತೆಗಳ ಸುತ್ತ ಜನದಟ್ಟಣೆ : ಅರಮನೆ ಸುತ್ತ ಇರುವ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗಿ ಕಂಡುಬಂತು. ವಾಹನ ಸಂಚಾರ ನಿರ್ಬಂಧ ಹೇರಿದ್ದರಿಂದ ಯಾವುದೇ ಆತಂಕವಿಲ್ಲದೆ ಜನರು ಆರಾಮಾಗಿ ರಸ್ತೆಗಳ ಮಧ್ಯೆದಲ್ಲಿಯೇ ತಿರುಗಾಡಿದರು.

ಸಾಲಾನೆಗಳನ್ನು ಕಂಡು ಸಿಳ್ಳೆ ಹೊಡೆದ ಸಾರ್ವಜನಿಕರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಅರಮನೆಗೆ ತೆರಳಿದ ನಂತರ ಅರ್ಧಗಂಟೆ ಬಳಿಕ ನಿಶಾನೆ ಆನೆ ಧನಂಜಯನೊಂದಿಗೆ ಹೆಜ್ಜೆ ಹಾಕಿದ ಸಾಲಾನೆಗಳನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ನೋಡಿದ ಸಾರ್ವಜನಿಕರು ಹಾಗೂ ಪ್ರವಾಸಿಗರು, ಸಿಳ್ಳೆ ಹೊಡೆದು, ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಮಾವುತರು ಆನೆಗಳಿಂದ ಸಲಾಂ ಹೊಡೆಸಿದರು.
ರಸ್ತೆ ಬದಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ : ಅರಮನೆ ಆಸುಪಾಸಿನಲ್ಲಿ ಇದ್ದ ಟೀ ಅಂಗಡಿ, ಫಾಸ್ಟ್ಫುಡ್ ಅಂಗಡಿಗಳಿಗೆ ಭರ್ಜರಿ ವ್ಯಾಪಾರವಾಯಿತು. ಅಲ್ಲದೇ, ರಸ್ತೆ ಬದಿಗಳಲ್ಲಿ ನೀರಿನ ಬಾಟಲ್, ಇತರೆ ತಿಂಡಿಗಳು ಭರ್ಜರಿಯಾಗಿ ಮಾರಾಟವಾದವು.
ದಸರಾ ನೋಡಲು ಶಿಥಿಲಾವಸ್ಥೆ ಕಟ್ಟಡ ಏರಿದ ಜನ : ಕಲಾತಂಡಗಳ ನೃತ್ಯದ ಸೊಬಗು, ಸ್ತಬ್ಧಚಿತ್ರಗಳನ್ನು ಕಣ್ತುಂಬಿಕೊಳ್ಳಲು, ಜಂಬೂಸವಾರಿಯನ್ನು ನೋಡಲು ಶಿಥಿಲಾವಸ್ಥೆಯಲ್ಲಿದ್ದ ಲ್ಯಾನ್ಸ್ ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಬಿಲ್ಡಿಂಗ್‌ಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು.
ಇದನ್ನೂ ಓದಿ : ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; 5ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು