ಬೆಂಗಳೂರು: ನ್ಯಾಯಮೂರ್ತಿಗಳು ಹೇಗೆ ತೀರ್ಪು ನೀಡುತ್ತಾರೆ ಮತ್ತು ಆ ತೀರ್ಪುಗಳ ನಂತರ ಹೇಗೆ ರಾಜ್ಯಪಾಲರು, ಸರ್ಕಾರದ ವಿವಿಧ ಹುದ್ದೆಗಳಿಗೆ ಹೇಗೆ ನೇಮಕಗೊಂಡಿದ್ದಾರೆ ಎಂಬುದು ದೇಶದ ಜನರಿಗೆ ಗೊತ್ತಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ ಅಭಿರುಚಿ ಪ್ರಕಾಶನ ಹೊರ ತಂದಿರುವ ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರ 'ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪಶ್ಚಿಮ ಬಂಗಾಳದ ಸಿಂಗೂರ್ ಪ್ರಕರಣದಲ್ಲಿ ತಾವು ನೀಡಿದ ತೀರ್ಪು ಜಾಗತಿಕ ಗಮನ ಸೆಳೆಯಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ನಿವೃತ್ತಿಯಾದ ನಂತರ ಪಶ್ಚಿಮ ಬಂಗಾಳದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಾಗಿ ತಿಳಿಸಿದರು. ಆದರೆ ಈ ಹುದ್ದೆಯನ್ನು ತಿರಸ್ಕರಿಸಿದೆ. ಲಾಭದ ಉದ್ದೇಶದಿಂದ ಜೀವಮಾನದಲ್ಲಿ ತೀರ್ಪು ನೀಡಿಲ್ಲ. ರೈತರು, ಬಡವರು, ಶ್ರಮಿಕರ ಪರವಾಗಿ ಸದಾ ಕಾಲ ನಿಲ್ಲುತ್ತಿದ್ದೆ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ತೀರ್ಪುಗಳನ್ನು ನೀಡಿದ ನಂತರ ಲೋಕಾಯುಕ್ತರು, ರಾಜ್ಯಪಾಲರಾಗುತ್ತಿದ್ದಾರೆ. ಹೇಗೆ ಇಂತಹ ಹುದ್ದೆಗಳಿಗೆ ನೇಮಕಗೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನ್ಯಾಯಮೂರ್ತಿಗಳು ಪುಸ್ತಕದ ಬದನೆಕಾಯಿಯಾಗಬಾರದು. ಜನರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಬೇಕು. ಅರ್ಹತೆ ಆಧಾರದ ಮೇಲೆ ತೀರ್ಪು ನೀಡಬೇಕು. ಸಾಮಾನ್ಯ ಜನತೆ, ದುರ್ಬಲ ವರ್ಗದವರ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಕಾವೇರಿ ನ್ಯಾಯಮಂಡಳಿ ಐ ತೀರ್ಪು ವಿರುದ್ಧವಾಗಿ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಾಗ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಸರ್ಕಾರವೇ ಪತನಗೊಳ್ಳುವ ಆತಂಕದಲ್ಲಿತ್ತು. ಆಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಒಂದು ದಿನ ಕಾನೂನು ಸಚಿವರು, ಕಾನೂನು ಕಾರ್ಯದರ್ಶಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದ ತಮ್ಮನ್ನು ಭೇಟಿಯಾಗಲು ಮನೆಗೆ ಬಂದಿದ್ದರು. ಆಗ ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ರಕ್ಷಣೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ. ಈ ವಿಚಾರಕ್ಕಾಗಿ ತಾವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಲು ಸಹ ಸಿದ್ಧ ಎಂದು ಹೇಳಿದ್ದೆ. ಸರ್ಕಾರ, ರೈತರು, ಜನರ ಪರ ನಿಲ್ಲುತ್ತೇನೆ ಎಂದು ಹೇಳಿದೆ. ಸರ್ಕಾರಕ್ಕೆ ಭುಜಕ್ಕೆ ಭುಜಕೊಟ್ಟು ನಿಂತೆ. ನಂತರ ನಮ್ಮ ಸಹ ನ್ಯಾಯಮೂರ್ತಿಗಳಿಗೆ ಕಾವೇರಿ ವಿವಾದದ ವಿಷಯವನ್ನು ಚೆನ್ನಾಗಿ ಅರ್ಥೈಸಿಕೊಂಡು ಕೂಲಂಕಶವಾಗಿ ಪರಿಶೀಲನೆ ಮಾಡುವಂತೆ ಸಲಹೆ ಮಾಡಿದ್ದಾಗಿ ಜಸ್ಟೀಸ್ ವಿ. ಗೋಪಾಲಗೌಡ ಸ್ಮರಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ವಿಶೇಷ ಪ್ರಾಸಿಕ್ಯೂಟರ್ ನೇಮಿಸಿದ ಸರ್ಕಾರ - Special Prosecutor Appointed
ಸರ್ಕಾರ ಕಳೆದ ಸೆಪ್ಟೆಂಬರ್ನಲ್ಲಿ ಕಾವೇರಿ ನೀರು ಕುರಿತ ಬಿಕ್ಕಟ್ಟು ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಕರೆದಿದ್ದರು. ಸಭೆಗೂ ಮುನ್ನ ಕಾವೇರಿ ವಿಚಾರದಲ್ಲಿ ವಾದ ಮಾಡಲು ವಕೀಲರಿಗೆ 142 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಈ ಹಣದಲ್ಲಿ ಮತ್ತೊಂದು ಅಣೆಕಟ್ಟೆ ನಿರ್ಮಿಸಬಹುದಾಗಿತ್ತು ಎಂದು ನೇರವಾಗಿಯೇ ಹೇಳಿದೆ. ಆಗ ಈ ವಿಚಾರವನ್ನು ಮತ್ತೊಮ್ಮೆ ಚರ್ಚಿಸೋಣ ಎಂದಿದ್ದರು. ಈಗ ಕಾವೇರಿ ವಿವಾದ ಕುರಿತಂತೆ ಈ ಕೃತಿ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದೆ. ಬೆಂಗಳೂರಿನಲ್ಲಿ ಕಾವೇರಿ ನೀರು ಕುಡಿಯುತ್ತಿದ್ದರೂ ಕಾವೇರಿ ವಿವಾದದ ಬಗ್ಗೆ ಅರಿವು ಇಲ್ಲದವರು ಇದ್ದಾರೆ. ಈ ದೇಶದಲ್ಲಿ ವಿದ್ಯಾರ್ಥಿ ಮತ್ತು ಯುವ ಸಮೂಹ ದಿಕ್ಕು ತಪ್ಪುತ್ತಿದೆ. ಇದು ಅಪಾಯಕಾರಿ ರಾಜಕೀಯ ಪಲ್ಲಟಗಳಿಗೆ ಕಾರಣವಾಗಿದೆ. ರಾಜಕೀಯದ ನೆಲೆಯನ್ನು ಅರ್ಥಮಾಡಿಕೊಂಡು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾವೇರಿ ಒಪ್ಪಂದದಲ್ಲಿ ಅನ್ಯಾಯವಾಗಿದ್ದು, ನ್ಯಾಯ ಮಂಡಳಿ ಸದಸ್ಯರ ಆಯ್ಕೆಯಲ್ಲೂ ನ್ಯಾಯ ಸಿಗಲಿಲ್ಲ. ಬೆಳೆಯುತ್ತಿರುವ ಜನಸಂಖ್ಯೆ, ಮಳೆ ಪ್ರಮಾಣ, ಪರಿಸರ ಬದಲಾವಣೆ, ಕೃಷಿಗೆ ಬೇಕಾಗುವ ನೀರಿನ ಲೆಕ್ಕ, ಆರ್ಥಿಕ ನೀತಿ ಹೀಗೆ ಹತ್ತು ಹಲವು ವಿಚಾರಗಳಲ್ಲಿ ರಾಜ್ಯದಿಂದ ಪ್ರಬಲ ವಾದ ಮಂಡನೆಯಾಗಿಲ್ಲ. ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ನ್ಯಾಯ ನೀಡುತ್ತಿಲ್ಲ. ಇದೀಗ ಇಡ್ಲಿ ತಿಂದರೆ ಜಿ.ಎಸ್.ಟಿ ಪಾವತಿಸುವ ಪರಿಸ್ಥಿತಿ ಇದೆ. ಬರಗಾಲ ಬಂದಾಗ ಕೇಂದ್ರ ಸರ್ಕಾರ ಸಕಾಲಕ್ಕೆ ಹಣ ಕೊಡಲಿಲ್ಲ. ಭಾರತ ಚೆನ್ನಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಬೇರೆ ದೇಶದಲ್ಲಿ ಕೊಚ್ಚಿಕೊಳ್ಳುವುದು ಮಾತ್ರ ಕಡಿಮೆಯಾಗಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ನ್ಯಾ. ಗೋಪಾಲಗೌಡ ಪ್ರಹಾರ ಮಾಡಿದರು.
ಕಾರ್ಯಕ್ರಮದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗ ಅಧ್ಯಕ್ಷ ಬಿ.ಕೆ. ಶಿವರಾಂ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ಡಬ್ಲ್ಯೂ.ಪಿ. ಕೃಷ್ಣ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ಮಟ್ಟು, ಪ್ರಕಾಶಕ ಅಭಿರುಚಿ ಗಣೇಶ್, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ, ಹೋಗುವಾಗ ವಿಧಾನಸೌಧ ಅಡ ಇಟ್ಟು ಹೋಗಬಹುದು: ಆರ್.ಅಶೋಕ್ - R ASHOK