ಹುಬ್ಬಳ್ಳಿ : ನಂದಿನಿ ಹಾಲಿನ ದರ ಪರಿಷ್ಕರಣೆ ವಿರುದ್ಧ ವಾಣಿಜ್ಯ ನಗರಿ ಗ್ರಾಹಕರು ಗರಂ ಆಗಿದ್ದಾರೆ. ಈಗಾಗಲೇ ತರಕಾರಿ ಬೆಲೆ ಗಗನಕ್ಕೇರಿದೆ. ಅದರ ಜೊತೆಗೆ ಅತೀ ಅವಶ್ಯಕವಾಗಿರುವ ಹಾಲಿನ ದರ ಹೆಚ್ಚಳ ಮಾಡಿದ್ದು ಸರಿಯಲ್ಲ ಎಂದು ಗ್ರಾಹಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
''ಹಾಲಿ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ವರ್ಷ ಏರಿಕೆ ಮಾಡುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಪೆಟ್ರೋಲ್ ಇಲ್ಲದೆ ಜೀವನ ಸಾಗಿಸಬಹುದು. ಆದ್ರೆ ದಿನಬಳಕೆಗೆ ಅವಶ್ಯಕವಾದ ಹಾಲಿನ ದರ ಏರಿಕೆ ಮಾಡಿದ್ದು ಸರಿಯಲ್ಲ. ಹಾಲು ಜೀವಾಮೃತ. ಹೀಗಾಗಿ ಸರ್ಕಾರ ಕೂಡಲೇ ಹಾಲಿನ ದರ ಇಳಿಕೆ ಮಾಡಬೇಕು. ಎರಡು ಸಾವಿರ ಮಹಿಳೆಯರಿಗೆ ಕೊಡುತ್ತಿದ್ದಾರೆ. ಆದ್ರೆ ಈಗ ಬೇರೆ ಮಾರ್ಗದಿಂದ ಅದನ್ನು ಹಿಂದಕ್ಕೆ ಪಡೆಯುವ ಕೆಲಸವಾಗುತ್ತಿದೆ. ಸರ್ಕಾರ ಹಾಲಿನ ದರ ಕಡಿಮೆ ಮಾಡಬೇಕು'' ಎಂದು ಗ್ರಾಹಕಿ ಉಮಾ ಒತ್ತಾಯಿಸಿದರು.
ಗ್ರಾಹಕಿ ಜ್ಯೋತಿ ಮಾತನಾಡಿ, ''ಬಡ ಮಧ್ಯಮ ವರ್ಗದವರಿಗೆ ಹಾಲಿನ ದರ ಹೆಚ್ಚಳ ಶಾಕ್ ನೀಡಿದೆ. ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಈಗ ಹಾಲಿನ ದರ ಹೆಚ್ಚಳ ಮಾಡಿದ್ದರಿಂದ ಬಡವರು ಜೀವನ ನಡೆಸುವುದು ಹೇಗೆ? ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಅಂತ ಕೊಟ್ಟು ಈಗ ಕಸಿದುಕೊಳ್ಳುತ್ತಿದ್ದಾರೆ. ನಮಗೆ ಯಾವ ಯೋಜನೆಯೂ ಬೇಡ, ಮೊದಲಿನಂತೆ ದರ ಇದ್ರೆ ಸಾಕು'' ಎಂದಿದ್ದಾರೆ.
ನಂದಿನಿ ಹಾಲಿನ ವ್ಯಾಪಾರಿ (ಡಿಸ್ಟ್ರಿಬ್ಯೂಟರ್) ಗುರುಸಿದ್ದಪ್ಪ ಕಟಗಿ ಮಾತನಾಡಿ, ''ಒಂದು ವರ್ಷದ ಹಿಂದೆ ಹಾಲಿನ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಹೊರೆ ಬೀಳಲಿದೆ. ಕಡುಬಡವರೇ ಹೆಚ್ಚಿಗೆ ಬರುವುದರಿಂದ ಖರೀದಿ ಕಡಿಮೆಯಾಗುವ ಆತಂಕ ಇದೆ. ನಮಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಇಲ್ಲ. ವಿದ್ಯುತ್ ಬಿಲ್, ಬಾಡಿಗೆ ಕಟ್ಟಬೇಕು. ಹಾಲು ಹಂಚಿಕೆದಾರರ ಪರವಾಗಿ ಸರ್ಕಾರ ನಿಲ್ಲಬೇಕು. ನಮ್ಮ ಕಡೆಯಿಂದ ಯಾರಾದ್ರು ಹೆಚ್ಚಿನ ಹಾಲು ಖರೀದಿ ಮಾಡುತ್ತಿದ್ದರೆ ಡೈರಿಯವರೇ ನೇರವಾಗಿ ಅವರಿಗೆ ಹಾಲು ಕೊಡಲು ಆರಂಭಿಸುತ್ತಾರೆ. ಹೀಗಾಗಿ ನಮಗೆ ಹೊಡೆತ ಬೀಳುತ್ತಿದೆ. ಕಮಿಷನ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಅಂಗಡಿ ಬಂದ್ ಮಾಡುವ ಸ್ಥಿತಿಗೆ ಬಂದಿದ್ದೇವೆ'' ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದನ್ನೂ ಓದಿ : ಹಾಲಿನ ದರ ಏರಿಸಿದ ಸರ್ಕಾರ: ದಾವಣಗೆರೆ ಜನ ಹೇಳಿದ್ದೇನು? - Milk Price Hike Reactions