ಬೆಳಗಾವಿ: ಜಿಲ್ಲಾದ್ಯಂತ ನಿನ್ನೆ ಧಾರಾಕಾರ ಮಳೆಯಾಗಿದ್ದು, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಮತ್ತೊಂದೆಡೆ ಹಳ್ಳಕೊಳ್ಳ ದಾಟುವುದು ಹೇಗೆ? ಎಂಬ ಭಯವೂ ಕಾಡುತ್ತಿದೆ. ರಾಮದುರ್ಗ ತಾಲೂಕಿನಲ್ಲಿ ಜೀವ ಭಯದಲ್ಲೇ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಪಾಲಕರು ಮಕ್ಕಳನ್ನು ದಾಟಿಸಿದ ಘಟನೆ ನಡೆದಿದೆ.
ಅದೇ ಗ್ರಾಮದ ಲಕ್ಷ್ಮಿ ನಗರದಿಂದ ಮಕ್ಕಳು ಉಡಚಮ್ಮನಗರ ಸರ್ಕಾರಿ ಶಾಲೆಗೆ ಹೋಗುತ್ತಾರೆ. ಹಳ್ಳದಲ್ಲಿ ಹರಿಯುವ ನೀರು ರಭಸವಾದರೆ, ಪೋಷಕರ ಜೊತೆಗೆ ಮಕ್ಕಳು ಕೊಚ್ಚಿಕೊಂಡು ಹೋಗುವ ಭೀತಿ ಇದೆ. ಲಕ್ಷ್ಮಿ ನಗರದಿಂದ ನಿತ್ಯ 24ಕ್ಕೂ ಅಧಿಕ ಮಕ್ಕಳು ಹಳ್ಳ ದಾಟಿಯೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಉಡಚಮ್ಮನಗರ ಹಾಗೂ ಲಕ್ಷ್ಮಿ ನಗರದ ಮಾರ್ಗಮಧ್ಯೆ ಸತ್ಯಮ್ಮನ ಹಳ್ಳ ಇದೆ. ಪ್ರತೀ ಮುಂಗಾರು ಸಮಯದಲ್ಲಿ ಕೃಷಿ ಚಟುವಟಿಕೆ ಬಿಟ್ಟು ಮಕ್ಕಳನ್ನು ದಾಟಿಸಲು ಪೋಷಕರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗುತ್ತದೆ.
ಉಡಚಮ್ಮನಗರ -ಲಕ್ಷ್ಮಿ ನಗರ ನಡುವೆ ಕೇವಲ 800 ಮೀಟರ್ ಅಂತರವಿದ್ದು, ನೀರಿನ ಪ್ರಮಾಣ ಅಧಿಕವಾದರೆ ಉಡಚಮ್ಮನಗರದಲ್ಲಿರುವ ಸ್ನೇಹಿತರ ಮನೆಯಲ್ಲೇ ಮಕ್ಕಳು ಇರಬೇಕಾದ ಸ್ಥಿತಿ ಈಗಲೂ ಇದೆ. ನರಗುಂದದಿಂದ ರಾಮದುರ್ಗ ಕಡೆಗೆ ಹರಿಯುವ ಸತ್ಯಮ್ಮನ ಹಳ್ಳಕ್ಕೆ ಬ್ರಿಡ್ಜ್ ನಿರ್ಮಿಸಬೇಕು ಎಂದು ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನರು ಬೇಡಿಕೆ ಇಟ್ಟಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ರಾಮದುರ್ಗ ತಾಲೂಕಿನ ಉಡಚಮ್ಮನಗರ ಗ್ರಾಮದ ಭಯಾನಕ ದೃಶ್ಯ ಇದಾಗಿದ್ದು, ಜೀವದ ಹಂಗು ತೊರೆದು ಹಳ್ಳದಲ್ಲೇ ನಿಂತು ಮಕ್ಕಳನ್ನು ಆ ಕಡೆಯಿಂದ ಈ ಕಡೆಗೆ ಪೋಷಕರು ಸ್ಥಳಾಂತರ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಬಾರಿಯಾದರೂ ಈ ಸಮಸ್ಯೆಯನ್ನು ಬಗೆಹರಿಸಿ ನಮ್ಮ ಮಕ್ಕಳು ಜೀವ ಭಯವಿಲ್ಲದೇ ಸ್ವತಂತ್ರ್ಯವಾಗಿ ಹಳ್ಳ ದಾಟಲು ನೆರವಾಗುವಂತೆ ಸೇತುವೆ ನಿರ್ಮಿಸಿಕೊಡುವಂತೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸ್ಥಳೀಯ ಶಾಸಕ ಅಶೋಕ ಪಟ್ಟಣ ಅವರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನುಗ್ಗಿದ ನೀರು: ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ಈ ಹಿಂದೆ ಎಣ್ಣೆ ಹೊಂಡ ತುಂಬಿದರೂ ಕೂಡ ಮಳೆ ನೀರು ಮುಂದೆ ಹರಿದು ಹೋಗುತ್ತಿತ್ತು. ಈ ಬಾರಿ ಚರಂಡಿಗಳನ್ನು ಸ್ವಚ್ಛಗೊಳಿಸದ ಹಿನ್ನೆಲೆ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕೆಲಕಾಲ ಭಕ್ತರು ಪರದಾಟ ನಡೆಸುವಂತಾಯ್ತು.