ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫ್ಲವರ್ಶೋ ನಡೆಯುತ್ತಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಷಯಾಧಾರಿತವಾಗಿ ಫ್ಲವರ್ ಶೋ ಪ್ರದರ್ಶನಗೊಳ್ಳುತ್ತಿದೆ. ಲಕ್ಷಾಂತರ ಜನರು ಕೆಂಪು ತೋಟದತ್ತ ಆಗಮಿಸುತ್ತಿದ್ದಾರೆ.
'ಈಟಿವಿ ಭಾರತ'ದ ಜೊತೆ ಮಾತನಾಡಿದ ಮೈಸೂರಿನ ವಿಜಯಲಕ್ಷ್ಮಿ, "ಈ ಬಾರಿ ಅಂಬೇಡ್ಕರ್ ಜೀವನಾಧಾರಿತ ಫ್ಲವರ್ ಶೋ ಆಯೋಜಿಸಿರುವುದು ಸಂತಸ ತಂದಿದೆ. ಇಡೀ ಭಾರತದಲ್ಲಿ ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಪಡೆದು ಜನರು ಜೀವಿಸುತ್ತಿದ್ದಾರೆ. ಅವರ ಇತಿಹಾಸ ಹೂವುಗಳ ಮೂಲಕ ಅನಾವರಣಗೊಂಡಿರುವುದು ವಿಶೇಷ" ಎಂದು ಹೇಳಿದರು.
ಬೀದರ್ನಿಂದ ಫ್ಲವರ್ ಶೋ ನೋಡಲು ಬಂದ ಪಂಚಶೀಲ ಗೊಡಬಲೇ ಮಾತನಾಡಿ, "ಎಲ್ಲ ತರಹದ ಹೂವುಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಅಂಬೇಡ್ಕರ್ ಜೀವನಾಧಾರಿತ ಕಲ್ಪನೆಯಲ್ಲಿ ಫ್ಲವರ್ ಶೋ ಮೂಡಿ ಬಂದಿರುವುದು ಜನರ ಮನಸೂರೆಗೊಳ್ಳುವಂತಿದೆ" ಎಂದು ಅಭಿಪ್ರಾಯಪಟ್ಟರು.
ಸೇಲಂನಿಂದ ಫ್ಲವರ್ ಶೋ ನೋಡಲು ಬಂದಿದ್ದ ಸಂಗೀತ ಮಾತನಾಡಿ, "ಪ್ರತೀ ವರ್ಷ ಫ್ಲವರ್ ಶೋ ನೋಡಲೆಂದೇ ಸೇಲಂನಿಂದ ಬೆಂಗಳೂರಿಗೆ ಬರುತ್ತೇನೆ. ಈ ಬಿಸಿಲಿನಲ್ಲಿ ಹೂವುಗಳನ್ನು ಬಾಡದಂತೆ ನೋಡಿಕೊಳ್ಳುವುದೇ ಒಂದು ಸವಾಲಿನ ಕೆಲಸ" ಎಂದರು.
ಬಿಷಪ್ ಕಾಟನ್ ಸ್ಕೂಲ್ನ 10ನೇ ತರಗತಿಯ ವಿದ್ಯಾರ್ಥಿ ಕಾನ್ಷಿರತನ್ ಮಾತನಾಡಿ, "ಅಂಬೇಡ್ಕರ್ ಮತ್ತು ನಮ್ಮ ದೇಶದ ಇತಿಹಾಸ ತುಂಬಾ ಜನರಿಗೆ ಪರಿಚಯವಿಲ್ಲ. ಅಸಡ್ಡೆಯ ವಾತಾವರಣವಿದೆ. ಆದರೆ ಫ್ಲವರ್ ಶೋ ಮಾಹಿತಿ ಕೊರತೆ ತುಂಬುತ್ತಿದೆ" ಎಂದು ಹೇಳಿದರು.