ಕಾರವಾರ(ಉತ್ತರ ಕನ್ನಡ): ಕಾಳಿ ನದಿಗೆ ನಾಲ್ಕು ದಶಕಗಳ ಹಿಂದೆ ಕಟ್ಟಿದ್ದ ಸೇತುವೆ ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದೆ. ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ ಕುಸಿದ ಸೇತುವೆ ನೋಡಲು ತಡರಾತ್ರಿಯಿಂದಲೂ ಈ ಪ್ರದೇಶದಲ್ಲಿ ಜನ ಜಾತ್ರೆಯಂತೆ ಸೇರುತ್ತಿದ್ದಾರೆ. ಈ ಬೆಳವಣಿಗೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಕಾರವಾರದಿಂದ ಗೋವಾಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಸೇತುವೆ ಕುಸಿದಿದೆ. ಇದರೊಂದಿಗೆ ಟ್ರಕ್ ಕೂಡ ನದಿಗುರುಳಿದೆ. ಇದೀಗ ಹೆದ್ದಾರಿಯಲ್ಲಿ ಬೈಕ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೊಸ ಸೇತುವೆ ಮೇಲೆ ಯಾವುದೇ ಭಾರೀ ವಾಹನ ಓಡಾಟ ಮಾಡದ ಕಾರಣ ಜನರು ನಡೆದುಕೊಂಡೇ ಓಡಾಡತೊಡಗಿದ್ದಾರೆ. ಸೇತುವೆಯ ಎರಡು ಬದಿ ಹೆದ್ದಾರಿಯಲ್ಲಿ ಲಾರಿ ಸೇರಿದಂತೆ ಹಲವು ವಾಹನಗಳು ಸಾಲುಗಟ್ಟಿವೆ.
ವಾಹನ ದಟ್ಟಣೆ ಉಂಟಾಗದಂತೆ ಸರಕು ವಾಹನಗಳನ್ನು ಅಂಕೋಲಾದ ಹಟ್ಟಿಕೇರಿ ಟೋಲ್‌ಗೇಟ್ ಬಳಿ ತಡೆಯಲಾಗಿದೆ. ಗೋವಾದಿಂದ ಆಗಮಿಸಿದ ವಾಹನಗಳನ್ನು ಕೂಡ ಸದಾಶಿವಗಡದಿಂದಲೇ ತಡೆಯಲಾಗಿದೆ.
ಈ ಬಗ್ಗೆ ಸ್ಥಳೀಯರಾದ ಪ್ರಕಾಶ್ ನಾಯ್ಕ್ ಪ್ರತಿಕ್ರಿಯಿಸಿ, ''1983ರಲ್ಲಿ ಕಟ್ಟಲಾಗಿದ್ದ ಈ ಬ್ರಿಡ್ಜ್ ಇವತ್ತು ಶಿಥಿಲಾವಸ್ಥೆಗೆ ಬಂದು ನಿಂತಿದೆ. ರಾತ್ರಿ ಅವಘಡ ಸಂಭವಿಸಿರುವುದರಿಂದ ಬಹುದೊಡ್ಡ ಅಪಾಯ ತಪ್ಪಿದೆ. ಈ ಬ್ರಿಡ್ಜ್ ಬಗ್ಗೆ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಪರಿಶೀಲನೆ ನಡೆಸಲಾಗಿತ್ತು. ಇದು ಇಂದಲ್ಲ ನಾಳೆ ಕುಸಿಯುತ್ತದೆ ಎಂಬ ವದಂತಿ ಹಬ್ಬಿತ್ತು. ಇದನ್ನು ರಿಪೇರಿ ಮಾಡುವ ಬದಲು ಹೊಸದಾಗಿ ಸೇತುವೆ ನಿರ್ಮಿಸುವುದು ಸರ್ಕಾರ ಹಾಗೂ NHAI ಅವರ ಕರ್ತವ್ಯ'' ಎಂದು ಹೇಳಿದ್ದಾರೆ.
ಡಿಸಿಯಿಂದ ಮಾಹಿತಿ ಪಡೆದ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇತುವೆ ಕುಸಿದು ಬಿದ್ದಿರುವ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಎಲ್ಲ ಸೇತುವೆಗಳು, ರಸ್ತೆಗಳ ಸುರಕ್ಷತೆಯ ಕುರಿತು ಖಾತರಿಪಡಿಸುವಂತೆ ಹಾಗೂ ಯಾವುದೇ ಜೀವಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಸೇತುವೆ ಕುಸಿದ ಸಂದರ್ಭದಲ್ಲಿ ಗಾಯಗೊಂಡ ಲಾರಿ ಚಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಕಾರ್ಯಾಚರಣೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್ಚುವರಿಯಾಗಿ, ಸೇತುವೆಯ ಬಲವತ್ತತೆಯ ಪರಿಶೀಲನೆಗಾಗಿ ಮತ್ತು ಪ್ರದೇಶದಲ್ಲಿನ ಎಲ್ಲಾ ಸೇತುವೆಗಳ ಸುರಕ್ಷತೆಯನ್ನು ಖಚಿತಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಅಧಿಕೃತ ಪತ್ರವನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು.