ಬೆಂಗಳೂರು: ದೇಹದೊಳಗೆ ಮರೆಮಾಚಿ ಕೊಕೇನ್ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ 9.2 ಕೋಟಿ ರೂ. ಮೌಲ್ಯದ 920 ಗ್ರಾಂ ನಾರ್ಕೋಟಿಕ್ ಕ್ಯಾಪ್ಸುಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ
ವೆನೆಜುವೆಲಾ ದೇಶದವನು ಎಂದು ಗುರುತಿಸಲಾಗಿದೆ.
ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನನ್ನು ಖಚಿತ ಮಾಹಿತಿಯ ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಶಕ್ಕೆ ಪಡೆದು ವಿಚಾರಣೆ ಮಾಡಿದೆ. ಈ ಸಂದರ್ಭದಲ್ಲಿ ಆತ ದೇಹದೊಳಗೆ ಮರೆಮಾಚಿ ಮಾದಕದ್ರವ್ಯ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಯಲ್ಲಿ ಒಳಪಡಿಸಿದಾಗ ದೇಹದಲ್ಲಿ 920 ಗ್ರಾಂ ನಾರ್ಕೋಟಿಕ್ ಕ್ಯಾಪ್ಸುಲ್‌ಗಳು ದೊರೆತಿವೆ. ವೈದ್ಯರ ಸಹಾಯದಿಂದ ಮಾದಕ ದ್ರವ್ಯವನ್ನು ಹೊರತೆಗೆಯಲಾಗಿದೆ. ಆರೋಪಿ ವಿರುದ್ಧ 1985ರ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
₹2 ಕೋಟಿ ಮೌಲ್ಯದ ಚಿನ್ನ ವಶ: ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕರನ್ನು ತಡೆದ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು 2 ಕೋಟಿ ರೂ. ಮೌಲ್ಯದ 3,311 ಗ್ರಾಂ ಬಂಗಾರವನ್ನು ಜನವರಿ 1ರಂದು ವಶಕ್ಕೆ ಪಡೆದಿದ್ದರು. ಅಲ್ಲದೆ, ಇತ್ತೀಚೆಗೆ ಡಿಸೆಂಬರ್ 23, 25, 29ರಂದು ಕೌಲಾಲಂಪುರ, ಜೆಡ್ಡಾ, ಶಾರ್ಜಾ ಮತ್ತು ಬ್ಯಾಂಕಾಕ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ವಿಮಾನಗಳಲ್ಲಿ ಬಂದಿಳಿದಿದ್ದ ಐವರು ಪುರುಷರು ಮತ್ತು 11 ಮಂದಿ ಮಹಿಳೆಯರನ್ನು ತಡೆದು ತಪಾಸಣೆ ನಡೆಸಿದಾಗ ಚಿನ್ನ ಕಳ್ಳಸಾಗಣೆ ಬೆಳಕಿಗೆ ಬಂದಿತ್ತು.
ಪ್ರಯಾಣಿಕರು ಶೂ ಸಾಕ್ಸ್, ಉಡುಪುಗಳು, ಪ್ಯಾಂಟ್ ಪಾಕೆಟ್‌ಗಳು, ಒಳ ಉಡುಪುಗಳು ಮತ್ತು ಕರವಸ್ತ್ರಗಳಲ್ಲಿ ಮರೆಮಾಚಿ ಬಂಗಾರ ಸಾಗಿಸುತ್ತಿದ್ದರು. ಕೂಡಲೇ ಪ್ರಯಾಣಿಕರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಅಕ್ರಮವಾಗಿ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಣೆ: ಮೊಣಕಾಲಿನ ಕ್ಯಾಪ್ನೊಳಗೆ ಮರೆಮಾಚಿ ಪೇಸ್ಟ್ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದನು. ಆರೋಪಿಯಿಂದ 47.89 ಲಕ್ಷ ರೂ ಮೌಲ್ಯದ 777.5 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿತ್ತು. ಜನವರಿ 31ರಂದು ಸಿಂಗಾಪುರ ಏರ್‌ಲೈನ್ಸ್ ಸಂಖ್ಯೆ SQ510 ವಿಮಾನದಲ್ಲಿ ಆರೋಪಿ ಕೆಐಎಎಲ್ಗೆ ಬಂದಿಳಿದಿದ್ದನು.
ಇದನ್ನೂ ಓದಿ: ಅಕ್ರಮ ಚಿನ್ನ ಸಾಗಣೆ; ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಬಿದ್ದ ಪ್ರಯಾಣಿಕ