ಬೆಂಗಳೂರು: ''ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕು ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ''28 ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಯಾರೆಂದು ಬಿಜೆಪಿ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಸೂಕ್ತ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಫೆ.10ರಂದು ರಾಜ್ಯಕ್ಕೆ ಅಮಿತ್ ಶಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಇದೇ 10ರಂದು ಬೆಂಗಳೂರಿಗೆ ಬರಲಿದ್ದಾರೆ. ಇಲ್ಲಿ ಲೋಕಸಭಾ ಕ್ಷೇತ್ರಗಳ ಕ್ಲಸ್ಟರ್ ಸಭೆಯಲ್ಲಿ ಭಾಗವಹಿಸುತ್ತಾರೆ. ನಂತರ ಕೋರ್ ಕಮಿಟಿ ಸದಸ್ಯರ ಜೊತೆ ಸಮಾಲೋಚನೆ ಮಾಡಲಿದ್ದಾರೆ. ಸರಕಾರಿ ಕಾರ್ಯಕ್ರಮವೂ ಇದೆ ಎಂದು ಕೇಳಿದ್ದೇವೆ. ಸಂಜೆ 5 ಗಂಟೆಗೆ ಸುತ್ತೂರು ಜಾತ್ರೆಯಲ್ಲೂ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.
ಹೈನುಗಾರರ 716 ಕೋಟಿ ಬಾಕಿ ಮೊತ್ತ ಬಿಡುಗಡೆಗೆ ಒತ್ತಾಯ: ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿದ ಹೈನುಗಾರರ 716 ಕೋಟಿ ರೂ. ಪ್ರೋತ್ಸಾಹಧನವನ್ನು ಗೌರವಯುತವಾಗಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರದ ಧೋರಣೆಯಿಂದ ಜನರು ಮಾತ್ರವಲ್ಲ, ಜಾನುವಾರುಗಳೂ ಈ ಸರಕಾರಕ್ಕೆ ಶಾಪ ಹಾಕುತ್ತಿವೆ. ರಾಜ್ಯದ ರೈತರು, ಬಡವರ ಕೋಪವಷ್ಟೇ ಅಲ್ಲ, ಜಾನುವಾರುಗಳ ಕೋಪಕ್ಕೂ ಕೂಡ ರಾಜ್ಯ ಸರಕಾರ ಸಿಲುಕಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದರು. ಅದರ ಪರಿಣಾಮವಾಗಿ ಬಿಜೆಪಿ ಆಡಳಿತದಲ್ಲಿದ್ದಾಗ 26 ಲಕ್ಷ ಗ್ರಾಮೀಣ ರೈತರಿಂದ ಪ್ರತಿದಿನ 80 ರಿಂದ 85 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿತ್ತು. ಇಂದಿನ ಕಾಂಗ್ರೆಸ್ ಸರಕಾರವು ಹಾಲು ಉತ್ಪಾದಕ ರೈತರಿಗೆ 716 ಕೋಟಿ ಬಾಕಿ ಪ್ರೋತ್ಸಾಹಧನವನ್ನು ಉಳಿಸಿಕೊಂಡಿದೆ. ಇದರ ಪರಿಣಾಮವಾಗಿ 10 ಲಕ್ಷ ಲೀಟರ್ನಷ್ಟು ಹಾಲು ಸಂಗ್ರಹಣೆ ಕಡಿಮೆ ಆಗಿದೆ'' ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಹಿರಿಯರು ಬಿಜೆಪಿ ಬಗ್ಗೆ ಟೀಕಿಸುತ್ತಾರೆ. ನಾನು ಆ ಭಾಷೆ ಬಳಸುವುದಿಲ್ಲ. ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ, ಬಾಕಿ ಉಳಿಸಿದ ಹೈನುಗಾರರ ಪ್ರೋತ್ಸಾಹಧನವನ್ನು ಗೌರವಯುತವಾಗಿ ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರೈತರ ದುಡ್ಡು ಉಳಿಸಿಕೊಂಡ ಪಾಪದ ಸರಕಾರ ಎಂದು ಜನರು ಶಾಪ ಹಾಕುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಜಾನುವಾರುಗಳ ಜೊತೆ ಹೋರಾಟ: ರಾಜ್ಯ ಸರಕಾರ ಪ್ರತಿಬಾರಿ ತನ್ನ ಹೊಣೆಗಾರಿಕೆ ಮರೆತು ಕೇಂದ್ರ ಸರಕಾರವನ್ನು ತೋರಿಸುತ್ತಿದೆ. ಹಣಕಾಸು ವಿಚಾರ ಬಂದೊಡನೆ ಮೋದಿಯವರು ಕೊಡುತ್ತಿಲ್ಲ, ಬಿಜೆಪಿಯವರಿಗೆ ಮಾನಮರ್ಯಾದೆ ಇದ್ದರೆ ಮೋದಿಯವರಿಗೆ ಮಾತನಾಡಲಿ ಎನ್ನುವ ಮಾತು ರಾಜ್ಯ ಸರಕಾರ ಮತ್ತು ಕಾಂಗ್ರೆಸ್ ನಾಯಕರಿಂದ ಕೇಳುತ್ತಿದ್ದೇವೆ. ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಜನರು ಮತ್ತು ಜಾನುವಾರುಗಳು ಒಟ್ಟಿಗೆ ಸೇರಿ ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜಸ್ವ ಸ್ವೀಕೃತಿ ಗುರಿ (ರೆವಿನ್ಯೂ ರಿಸೀಟ್) 2 ಲಕ್ಷ 38 ಸಾವಿರ ಕೋಟಿ ಇದ್ದು, ಡಿಸೆಂಬರ್ ಅಂತ್ಯಕ್ಕೆ 1 ಲಕ್ಷ 61 ಸಾವಿರ ಕೋಟಿ ರಾಜಸ್ವ ಮಾತ್ರ ಸ್ವೀಕಾರ ಆಗಿದೆ. ಕೇವಲ ಶೇ. 67 ಇವರ ಸಾಧನೆ. ನಮ್ಮ ಸರಕಾರ ಇದ್ದಾಗ ಡಿಸೆಂಬರ್ ವೇಳೆಗೆ ಶೇ 82 ಗುರಿ ಸಾಧಿಸಿದ್ದೆವು. ಸಿಎಂ ಅವರಿಗೆ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ಶೇ 82ರಿಂದ ಶೇ 67ಕ್ಕೆ ಇಳಿದಿರುವುದಕ್ಕೆ ಮೋದಿ ಜೀ ಅವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಯಾಕಾಗಿ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಜನರಿಗೆ ಉತ್ತರಿಸಿ ಎಂದು ಪ್ರಶ್ನಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ಪ್ರೀತಂ ಗೌಡ ಮತ್ತಿತರರು ಉಪಸ್ಥಿತರಿದ್ದರು.
ನಿಂತ ನೀರಿನ ಸರ್ಕಾರವಿದು: ಇದು ಆಮೆ ನಡಿಗೆಯ ಸರ್ಕಾರವೂ ಅಲ್ಲ, ನಿಂತ ನೀರಿನ ಸರ್ಕಾರ ಎಂಬುದನ್ನು ಕುಂತಲ್ಲೇ ಕೂತು ಧೂಳು ತಿನ್ನುತ್ತಿರುವ 1.37 ಲಕ್ಷ ಕಡತಗಳು ಸಾಕ್ಷಿ ನುಡಿಯುತ್ತಿವೆ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಇಡುವ ಮಾತು ಹಾಗಿರಲಿ ಜನರ ಕಷ್ಟ, ನಿವೇದನೆಗಳಿಗೆ ನಿತ್ಯ ಸ್ಪಂದಿಸಬೇಕಿದ್ದ ಕಡತಗಳೂ ಚಲನ ಶೀಲತೆ ಕಳೆದು ಕೊಂಡಿವೆ ಎಂದರೆ, ಈ ಸರ್ಕಾರ ಸ್ವಾಧೀನ ಕಳೆದು ಕೊಂಡಿದೆ ಎಂದೇ ಅರ್ಥೈಸಬೇಕಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿದ್ದಾರೆ.
''ಸರ್ಕಾರದ ಮಂತ್ರಿಗಳು ಜವಾಬ್ದಾರಿ ಮರೆತರೆ ಅಧಿಕಾರಿಗಳು ನಿಷ್ಕ್ರೀಯರಾಗುತ್ತಾರೆ. ಆಗ ಆಡಳಿತ ಯಂತ್ರವೂ ನಿಯಂತ್ರಣ ಕಳೆದು ಕೊಳ್ಳುತ್ತದೆ. ಇದರ ಪರಿಣಾಮದ ಬಿಸಿ ಅನುಭವಿಸುವವರು ಜನರು ಮಾತ್ರ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಸರ್ಕಾರ ಎಚ್ಚೆತ್ತು ಕೊಳ್ಳಲಿ, ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲಿ, ಈ ನಿಟ್ಟಿನಲ್ಲಿ ಈಗಷ್ಟೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿಗಳು ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸಲು ಹೊರಟಿದ್ದಾರೆ'' ಎಂದಿದ್ದಾರೆ.
ಇದನ್ನೂ ಓದಿ: ರಂಗೇರಿದ ಲೋಕಸಭಾ ಚುನಾವಣೆ: ಮಂಡ್ಯ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳಲು ಯತ್ನ