ಬೆಂಗಳೂರು: ಸುಗಮ ಸಂಚಾರ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆೆ ಗಾಂಧಿನಗರದ 1 ಕಿ.ಮೀ ಸುತ್ತಲಿನ ಪ್ರಮುಖ ರಸ್ತೆೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಫ್ರೀಡಂ ಪಾರ್ಕ್ ಸಮೀಪ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಮೂಲಕ ಬೆಂಗಳೂರು ಹೊಸ ಇತಿಹಾಸದ ಪುಟ ಸೇರಿದೆ. ರಾಜ್ಯಕ್ಕೆ ಈ ಮೂಲಕ ಸಂದೇಶ ರವಾನೆಯಾಗಿದೆ. ಪ್ರತಿ ಗಂಟೆಗೆ ವಾಹನ ನಿಲುಗಡೆಗೆ 20 ರಿಂದ 30 ರೂಪಾಯಿ ನಿಗದಿ ಮಾಡಲಾಗಿದೆ. ಎರಡ್ಮೂರು ಕಾರು ಹೊಂದಿರುವವರು ಕೂಡಾ ಇಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಬೆಂಗಳೂರು ಡಿಸಿ ಹಾಗೂ ಪೊಲೀಸ್ ಆಯುಕ್ತರು ಸೇರಿ ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧ ಮಾಡಲಾಗಿದೆ. ಇಲ್ಲಿನ ರಸ್ತೆೆ ವಿಶಾಲವಾಗಿರಬೇಕು. ಎಲ್ಲಾ ವ್ಯಾಪಾರಿಗಳಿಗೆ ಲಾಭವಾಗಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ನಗರದ ಯಾವುದೇ ಭಾಗದಿಂದ ಜನ ತಮ್ಮ ವಾಹನದಲ್ಲಿ ಬಂದರೂ ಇಲ್ಲಿ ಅವರು ವಾಹನ ನಿಲುಗಡೆ ಮಾಡಬಹುದು. ವಿಧಾನಸೌಧ, ಹೈಕೋರ್ಟ್, ರೈಲ್ವೆ ನಿಲ್ದಾಣ ಸೇರಿದಂತೆ ಗಾಂಧಿ ನಗರದ ಸುತ್ತಮುತ್ತಲಿನ ಪ್ರದೇಶಕ್ಕೆೆ ಹೋಗಲು ಗುತ್ತಿಗೆದಾರರು ಉಚಿತ ಸಂಚಾರಿ ವ್ಯವಸ್ಥೆೆ ಮಾಡುವುದಾಗಿ ಹೇಳಿದ್ದಾರೆ. ಗಾಂಧಿ ನಗರದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮುಖಂಡತ್ವದಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. ಗಾಂಧಿನಗರಕ್ಕೆ ಮಧ್ಯಮ ವರ್ಗದ ಜನ ಹೆಚ್ಚಾಗಿ ಬರುತ್ತಾರೆ. ಹೀಗಾಗಿ ವಾಹನ ನಿಲುಗಡೆ ಸಮಸ್ಯೆೆ ಎದುರಾಗುತ್ತಿತ್ತು. ಈಗ ಅದಕ್ಕೆ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಮಾಡುವ ಹೊಸ ಪ್ರಯೋಗಕ್ಕೆ ಗುತ್ತಿಗೆದಾರರು ಕೈ ಹಾಕಿದ್ದಾರೆ. ಅವರು ಸರ್ಕಾರಕ್ಕೂ 1.50 ಕೋಟಿ ಹಣ ಪಾವತಿಸಿ, ಹೇಗೆ ಆದಾಯ ಮಾಡುತ್ತಾರೋ ಗೊತ್ತಿಲ್ಲ. ಇದು ಸುಲಭವಾದ ಕೆಲಸವಲ್ಲ. ಈ ವ್ಯವಸ್ಥೆೆ ಗಾಂಧಿನಗರಕ್ಕೆ ಬಹಳ ಅವಶ್ಯಕವಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡಲು ಬರುವವರಿಗೂ ಇದರಿಂದ ಈ ಪಾರ್ಕಿಂಗ್ ಹೆಚ್ಚಿನ ಅನುಕೂಲವಾಗಲಿದೆ. ಎಲ್ಲೋ ಗಾಡಿ ನಿಲ್ಲಿಸಿ ಬರುವುದಕ್ಕಿಂತ ಇಂತಹ ವ್ಯವಸ್ಥೆೆ ಬಳಸಿಕೊಳ್ಳುವುದು ಹೆಚ್ಚಿನ ಅನುಕೂಲವಾಗುತ್ತದೆ. ಖಾಸಗಿಯವರು, ವರ್ತಕರು, ಗ್ರಾಹಕರು ಸೇರಿದಂತೆ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಇದು ಮಾದರಿ ಯೋಜನೆಯಾಗಿದ್ದು, ಬೆಂಗಳೂರಿನ ಇತರ ಕಡೆಗಳಲ್ಲಿ ಎಲ್ಲೆಲ್ಲಿ ಈ ಯೋಜನೆ ಜಾರಿ ಮಾಡಬಹುದು ಎಂದು ಚರ್ಚೆ ಮಾಡಿ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ಆರೋಗ್ಯ ಸಚಿವ ಹಾಗೂ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್, ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ಹರೀಶ್ ಕುಮಾರ್ ಮತ್ತಿತರರು ಇದ್ದರು.