ಮೈಸೂರು: ತಿಮಿಂಗಲವನ್ನು ಗೃಹ ಸಚಿವ ಪರಮೇಶ್ವರ್ ಪಕ್ಕದಲ್ಲೇ ಕುಳ್ಳಿರಿಸಿಕೊಂಡಿದ್ದಾರೆ. ಆ ತಿಮಿಂಗಲ ಯಾರು ಎನ್ನುವುದು ನನಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ತಿಮಿಂಗಲವನ್ನು ಹಿಡಿಯುವುದು ಬಿಟ್ಟು ನನ್ನನ್ನೇ ಕೇಳಿದ್ರೆ ಹೇಗೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಿಮಿಂಗಲ ಯಾರು ಎಂದು ಹೇಳಿದ್ರೆ ತನಿಖೆ ಸುಲಭವಾಗುತ್ತದೆ. ತಿಮಿಂಗಲ ಗೃಹಸಚಿವರ ಪಕ್ಕದಲ್ಲೇ ಕುಳಿತಿರುವಾಗ ಆ ತಿಮಿಂಗಲ ಯಾರು ಎನ್ನುವುದು ಪರಮೇಶ್ವರ್ಗೆ ಗೊತ್ತು. ಅವರನ್ನು ಬಿಟ್ಟು ನನ್ನನ್ನ ಕೇಳಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಎಸ್ಐಟಿಯನ್ನು ಕಾಣದ ಕೈ ನಿಯಂತ್ರಿಸುತ್ತಿದೆ. ಕಾಂಗ್ರೆಸ್ ಪಕ್ಷದ ಮಂಡ್ಯದ ಶಾಸಕರೊಬ್ಬರು ಇನ್ನೂ ಒಂದು ವಾರದಲ್ಲಿ ದೊಡ್ಡ ತಿಮಿಂಗಲ ಸಿಗುತ್ತದೆ ಅಂತ ಹೇಳಿದ್ದರು. ಆದರೆ, ಏನಾಯಿತು ಇನ್ನೂ ತನಿಖೆ ಆರಂಭವಾಗಲಿಲ್ಲ ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ಎಸ್ಐಟಿ ಗೃಹಸಚಿವರಿಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ, ಅವರ ಬದಲಾಗಿ ಬೇರೆಯವರಿಗೆ ಮಾಹಿತಿ ನೀಡುತ್ತಿದೆ. ನಾನು ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ. ನಿಮ್ಮ ತಂದೆ, ತಾಯಿ, ಸಹೋದರ, ಸಹೋದರಿಯವರ ಮುಖ ನೋಡಿಕೊಂಡು ತನಿಖೆ ಮಾಡಿ, ಆಗಲಾದರೂ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಸಿಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಡಿಸಿಎಂ ಡಿ ಕೆ ಶಿವಕುಮಾರ್, ತಿಮಿಂಗಲವನ್ನು ಕುಮಾರಸ್ವಾಮಿ ನುಂಗಿಕೊಳ್ಳಲಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಯ ಬರಲಿ ತಿಮಿಂಗಲವನ್ನೇ ನುಂಗಿ ಬಿಡೋಣ ಎಂದು ಹೇಳಿದರು.
ಪ್ರಜ್ವಲ್ ಬಗ್ಗೆ ಮಾಹಿತಿ ಇಲ್ಲ: ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ, ಈಗ ನನಗೆ ಸಿಗುತ್ತಾರೆಯೇ ಎಂದ ಅವರು. ಈ ಪ್ರಕರಣ ಆಗುವ ಹಿಂದೆಯೂ ನನ್ನ ಜೊತೆ ಇಲ್ಲ, ಇನ್ನೂ ವಿದೇಶಕ್ಕೆ ಹೋದ ಮೇಲೆ ನನ್ನ ಸಂಪರ್ಕಕ್ಕೆ ಸಿಗಲು ಸಾಧ್ಯವೇ ಎಂದು ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ತಿಳಿಸಿದರು.
ಎಸ್ಐಟಿಯಿಂದ ಸೂಕ್ತ ತನಿಖೆ ಆಗುತ್ತಿಲ್ಲ : ಎಸ್ಐಟಿ ಅನಾವಶ್ಯಕವಾಗಿ ಕೆಲವರನ್ನು ಬಂಧಿಸುತ್ತಿದೆ. ದೇವರಾಜೇಗೌಡ ವಿರುದ್ಧ ಪ್ರಕರಣ ದಾಖಲಾಗಿ ಒಂದು ತಿಂಗಳು ಕಳೆದ ನಂತರ ಅವರನ್ನು ಬಂಧಿಸುವ ಅಗತ್ಯ ಏನಿತ್ತು, ಅವರಿಂದ ಯಾವ ಮಾಹಿತಿ ಬೇಕಿತ್ತು. ಸಾಕ್ಷಿಗಳನ್ನು ನಾಶ ಮಾಡಲು ಎಸ್ಐಟಿ ಅವರನ್ನು ನಾಲ್ಕು ದಿನ ವಶಕ್ಕೆ ಪಡೆದಿದೆಯಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ. ವಿಡಿಯೋ ವೈರಲ್ ಮಾಡಿ ಅವರ ಕುಟುಂಬಗಳನ್ನು ಬೀದಿಗೆ ತಂದವರನ್ನ ಎಸ್ಐಟಿ ಬಂಧಿಸಿಲ್ಲವೇಕೆ?. ಪ್ರಮುಖ ಆರೋಪಿ ಖಾಸಗಿ ಚಾನೆಲ್ ಗೆ ಸಂದರ್ಶನ ನೀಡಲು ಸಿಗುತ್ತಾನೆ, ಆದರೆ ಎಸ್ಐಟಿಗೆ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ನಾನು ಹಿಟ್ ಅಂಡ್ ರನ್ ಅಲ್ಲ: ನನ್ನ ಬಳಿ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಮಾಹಿತಿ ಇರುವ ಪೆನ್ ಡ್ರೈವ್ ಇದೆ. ಆದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಈ ಸರ್ಕಾರಕ್ಕೆ ಇಲ್ಲ. ಕೆಲವು ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಹಣ ಹೊಂದಿಸಲು ಯಾವ ರೀತಿ ಪರದಾಡುತ್ತಿದ್ದಾರೆ ಎಂಬ ಮಾಹಿತಿ ಪೆನ್ಡ್ರೈವ್ನಲ್ಲಿ ಇದೆ. ಇದನ್ನು ದಾಖಲು ಸಮೇತ ನೀಡುತ್ತೇನೆ. ಕ್ರಮ ಕೈಗೊಳ್ಳಲು ಸರ್ಕಾರದಿಂದ ಸಾಧ್ಯವಿಲ್ಲ. ನಾನು ಹಿಟ್ ಅಂಡ್ ರನ್ ಅಲ್ಲ. ನಾನು ಪೆನ್ ಡ್ರೈವ್ ಕೊಟ್ಟರೆ ಕ್ರಮ ಕೊಳ್ಳಲು ಸರ್ಕಾರದಿಂದ ಸಾಧ್ಯವಿಲ್ಲ. ಅದಕ್ಕಾಗಿ ಪೆನ್ ಡ್ರೈವ್ ಕೊಡುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದರು.
ಇದನ್ನೂಓದಿ:ಬರ ಪರಿಹಾರ ಸಾಲಕ್ಕೆ ಜಮೆ ಕ್ರೂರಾತಿ ಕ್ರೂರ ವರ್ತನೆ: ಕುಮಾರಸ್ವಾಮಿ ಕಿಡಿ - H D Kumaraswamy