ಹಾಸನ: ಮುಂದಿನ ದಿನಗಳಲ್ಲಿ ಹಾಸನಾಂಬ ಜಾತ್ರೆಯನ್ನು ಇನ್ನೂ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರದಂದು ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಪ್ರತಿಕ್ರಿಯಿಸಿದರು.
ನಮಗೆ ದೇವಿ ದರ್ಶನ ಭಾಗ್ಯ ದೊರಕಿರುವುದು ಪುಣ್ಯ ಎಂದು ಭಾವಿಸುತ್ತೇನೆ. ನಾಡಿನ ಜನ ಸಮುದಾಯಕ್ಕೆ ಶಾಂತಿ ನೀಡುವಂತೆ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. 4-5 ವರ್ಷದ ಹಿಂದೆ ಬಂದು ದೇವಿಯ ದರ್ಶನ ಪಡೆದಿದ್ದೆ. ನಾವೆಲ್ಲರೂ ತಾಯಿಯನ್ನ ಭಕ್ತಿಯಿಂದ ಪೂಜೆ ಮಾಡುತ್ತೇವೆ. ಮೂರು ವರ್ಷದ ಹಿಂದೆ ಇದ್ದ ಭಕ್ತರ ಸಂಖ್ಯೆ ಇಂದು ಮೂರು ಪಟ್ಟು ಹೆಚ್ಚಿದೆ. ಪ್ರತಿ ದಿನ ಲಕ್ಷಾಂತರ ಮಂದಿ ದೇವಿ ದರ್ಶನ ಪಡೆಯುತ್ತಿದ್ದಾರೆ. ಜನರು ಆತ್ಮವಿಶ್ವಾಸ, ನಂಬಿಕೆಯಿಂದ ಹಿಂದೂ ಸಂಪ್ರದಾಯದಂತೆ ಭಕ್ತಿ ಇಟ್ಟುಕೊಂಡಿದ್ದಾರೆ. ರಾಜ್ಯ ಅಲ್ಲದೆ ಪಕ್ಕದ ರಾಜ್ಯದಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಹಾಸನಾಂಬ ದರ್ಶನ ಪಡೆಯುತ್ತಿದ್ದಾರೆ ಎಂದರು. ವಿಶೇಷವಾಗಿ ಮಹಿಳೆಯರು ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದನ್ನು ನೋಡಿಕೊಂಡು ಬಂದೆ. ಈ ಬಾರಿ ಮೂರು ಪಟ್ಟು ಹೆಚ್ಚು ಜನ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.
ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು. ಸಣ್ಣಪುಟ್ಟ ಘಟನೆ ನಡೆಯೋದು ಸಹಜ. ಮೂರು ದಿನಗಳು ದರ್ಶನಕ್ಕೆ ಬಾಕಿ ಇದ್ದು, ಸೂಕ್ತ ಬಂದೋಬಸ್ತ್ ಮಾಡಲು ಐಜಿ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಭಕ್ತರಿಗೆ ನಿರಾಸೆ ಆಗದಂತೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಇದೆ ವೇಳೆ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಮತ್ತಿತರರು ಹಾಜರಿದ್ದರು.
ದೇವಿ ದರ್ಶನ ಪಡೆದ ರೇವಣ್ಣ ದಂಪತಿ: ಹಾಸನಾಂಬೆ ದೇವಿಯ ದರ್ಶನ ಪಡೆದ ಹೆಚ್.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ಅವರು ಬಳಿಕ ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. "ದೇವಿ ದರ್ಶನ ಪಡೆದು ದೇವೇಗೌಡ, ಚೆನ್ನಮ್ಮನವರಿಗೆ ಆಶೀರ್ವಾದ ಬೇಡಿದ್ದೇನೆ. ರಾಜ್ಯದಲ್ಲಿ ಮಳೆಯಿಂದ ರೈತರಿಗೆ ಹಾನಿಯಾಗಿ ಜಿಲ್ಲೆಗಳಲ್ಲಿ ಹಲವಾರು ರೈತರ ಬೆಳೆ ನಾಶವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ, ಕೂಡಲೇ ಸರ್ಕಾರ ಅದನ್ನು ಬಗೆಹರಿಸಬೇಕೆಂದು ತಾಯಿಯಲ್ಲಿ ಕೇಳಿದ್ದೇನೆ ಎಂದರು.
ಪೊಲೀಸ್-ಕಂದಾಯ ಇಲಾಖೆ ವಿರುದ್ಧ ನಗರಸಭೆ ಸದಸ್ಯರ, ಪೌರಕಾರ್ಮಿಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ: ನಿತ್ಯ ಹಾಸನಾಂಬೆ ದೇವಾಲಯದ ಸುತ್ತ ಸ್ವಚ್ಛತೆಗೊಳಿಸುವ ಪೌರಕಾರ್ಮಿಕರಿಗೆ ದರ್ಶನ ಮಾಡಲು ಅವಕಾಶ ನೀಡಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಹಾಗೂ ಮಾಜಿ ಅಧ್ಯಕ್ಷ ಆರ್. ಮೋಹನ್ ನೇತೃತ್ವದಲ್ಲಿ ನಗರಸಭೆ ಸದಸ್ಯರು ಹಾಗೂ ನೌಕರರು ಮುಖ್ಯದ್ವಾರದ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.
ನಗರಸಭೆ ನೌಕರರು ವಿವಿಐಪಿ ಗೇಟ್ ನೂಕಿ ದೇವಾಲಯಕ್ಕೆ ಒಳನುಗ್ಗಲು ಯತ್ನಿಸಿದ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ಅವ್ಯವಸ್ಥೆಗೆ ವಿವಿಐಪಿ ಪಾಸ್ ಕಾರಣ; ಶಕ್ತಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹಾಸನ ಜಿಲ್ಲಾಡಳಿತದ ವಿರುದ್ಧ ಭಕ್ತರು ಸಿಟ್ಟಾಗಿದ್ದಾರೆ ಎಂದು ಜೆಡಿಎಸ್ ದೂರಿದೆ. ರಾಜ್ಯದ ಬೇರೆ ಬೇರೆ ಕಡೆಯಿಂದ ದೇವಿಯ ದರ್ಶನಕ್ಕೆ ಬಂದಿರುವ ಭಕ್ತರ ಮೇಲೆ ಪೊಲೀಸರ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದೆ.
ಭಕ್ತರು 1000 ರೂ., 300 ರೂ. ಕೊಟ್ಟು ಪಾಸ್ ಖರೀದಿಸಿದ್ದರೂ ಗಂಟೆಗಟ್ಟಲೇ ಕಾಯುವ ಶಿಕ್ಷೆ. ಇನ್ನು ಹಾಸನಾಂಬೆ ಜಾತ್ರೆಗಾಗಿ ರಾಜ್ಯ ಸರ್ಕಾರ ಹೆಚ್ಚುವರಿ 500 ಬಸ್‌ಗಳನ್ನು ನಿಯೋಜಿಸಿತ್ತು. ಆದರೆ ಏಕಾಏಕಿ ಆ 500 ಬಸ್‌ಗಳನ್ನು ಹಿಂಪಡೆದಿದೆ ಹಾಗೂ ಎಲ್ಲಾ ರೀತಿಯ ಪಾಸ್‌ಗಳನ್ನು ರದ್ದು ಪಡಿಸಿರುವುದು ಭಕ್ತರನ್ನು ಮತ್ತಷ್ಟು ಕೆರಳಿಸಿದೆ ಎಂದು ಹೇಳಿದೆ.
ಐದಾರು ಗಂಟೆಗಟ್ಟಲೆ ನಿಂತರೂ ಹಾಸನಾಂಬೆಯ ದರ್ಶನ ಸಿಗುತ್ತಿಲ್ಲ. ಧರ್ಮದರ್ಶನ ಸಾಲಿನಲ್ಲಿ ನಿಲ್ಲುವವರಿಗಿಂತ, ವಿವಿಐಪಿ ಪಾಸ್ ಹಿಡಿದು ನಿಲ್ಲುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಈ ಬಾರಿ ಲಕ್ಷಗಟ್ಟಲೇ ಬೇಕಾಬಿಟ್ಟಿ ವಿವಿಐಪಿ ಪಾಸ್ ಹಂಚಿದ್ದೇ ಈ ಅವ್ಯವಸ್ಥೆಗೆ ಮುಖ್ಯ ಕಾರಣ. ಹೊಣೆಗೇಡಿ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಬೇಜಾಬ್ದಾರಿಯಿಂದ ಈ ಬಾರಿಯ ಹಾಸನಾಂಬೆ ಜಾತ್ರೋತ್ಸವಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಜೆಡಿಎಸ್ ಟೀಕಿಸಿದೆ.
ಇದನ್ನೂ ಓದಿ: ಓದಿದ್ದು ಸ್ನಾತಕೋತ್ತರ ಪದವಿ: ಬದುಕು ಕಟ್ಟಿಕೊಂಡಿದ್ದು ಹಣತೆ ತಯಾರಿಸುವ ಕಾಯಕದಲ್ಲಿ!