ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರನ್ನೂ ದೂಷಣೆ ಮಾಡುವುದಿಲ್ಲ. ಪಕ್ಷದ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ. ಆದರೆ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ. ಎಲ್ಲಾ ಬೂತ್‌ಗಳಿಗೆ ಹೋಗಿ ಮುಂದಿನ ಒಂದೂವರೆ ವರ್ಷದಲ್ಲೇ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತೇನೆ. ಒಳ್ಳೆಯ ಕೆಲಸ ಯಾರೂ ಮಾಡಿದರೂ ಅನುಕರಿಸಡಬೇಕು. ಆದ್ದರಿಂದ ಬಿಜೆಪಿಯ ಸಂಘಟನೆಯ ಮಾದರಿಯಲ್ಲೇ ಪಕ್ಷ ಬಲಿಷ್ಠಗೊಳಿಸುಲ ಕಾರ್ಯ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಿಗೆ ಹೋಗಿ ಸರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗದಿರುವುದೇ ತನಗೆ ಮತ ಕಡಿಮೆಯಾಗಲು ಕಾರಣ. ನಾನು ಸೋತರೂ ರಾಷ್ಟ್ರಮಟ್ಟದ ನಾಯಕರು ನನಗೆ ಕರೆ ಮಾಡಿ ಧೈರ್ಯ ತುಂಬಿರುವುದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷ ಸಂಘಟನೆ ಸ್ವಲ್ಪ ದುರ್ಬಲವಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಸಂಘಟಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.
ನೂತನ ಸಂಸದ ಬ್ರಿಜೇಶ್ ಚೌಟ ಅವರಿಗೆ ಹೇಳುವುದೇನೆಂದರೆ, ತಾವು ಜಿಲ್ಲೆಯ ಅಭಿವೃದ್ಧಿಗೋಸ್ಕರ ಏನೇ ಕೆಲಸ ಮಾಡಿದರೂ ನಿಮ್ಮೊಂದಿಗಿರುತ್ತೇನೆ. ಅದರೊಂದಿಗೆ ಜಿಲ್ಲೆಯ ಸಾಮರಸ್ಯ ಗತವೈಭವವನ್ನು ಮರಳಿ ತರುವಲ್ಲಿಯೂ ತಮ್ಮ ಸಹಕಾರ ಅಗತ್ಯ ಎಂದು ಹೇಳಿದರು.
ಚುನಾವಣಾ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಯೋಧ್ಯೆಯ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿತ್ತು. ಆದರೆ ಅಯೋಧ್ಯೆಯ ಜನತೆ ಬಿಜೆಪಿಯನ್ನು ತಿರಸ್ಕರಿಸಿದರು. ಆದರೆ ಜಿಲ್ಲೆಯ ಜನತೆ ಇನ್ನೂ ಅಯೋಧ್ಯೆ ಅನ್ನುತ್ತಿದ್ದಾರೆ. ಆದ್ದರಿಂದ ಇಲ್ಲಿನವರು ಬುದ್ಧಿವಂತರೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಲಾರಂಭಿಸಿದೆ ಎಂದರು.
ಇದನ್ನೂ ಓದಿ: ಅತೀ ಹೆಚ್ಚು ಮತ್ತು ಅತೀ ಕಡಿಮೆ ಮತಗಳ ಅಂತರದಲ್ಲಿ ಗೆದ್ದ ರಾಜ್ಯದ 5 ಅಭ್ಯರ್ಥಿಗಳು - Lok Sabha Election Results