ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಡೆದ ಲಾಠಿಚಾರ್ಜ್ ವಿಚಾರ ಸೋಮವಾರ ಮಧ್ಯಾಹ್ನದ ವಿಧಾನ ಪರಿಷತ್ ಕಲಾಪದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯ್ತು. ಲಾಠಿ ಚಾರ್ಜ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಿರೋಧ ಪಕ್ಷದ ಸದಸ್ಯರು ಪಟ್ಟು ಹಿಡಿದರೆ, ಗೃಹ ಸಚಿವರು ಯಾವುದೇ ತನಿಖೆಗೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಿಂದಾಗಿ ಕಲಾಪ ಬಹಿಷ್ಕರಿಸಿ ಲಾಠಿ ಬೀಸುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ವಿರೋಧ ಪಕ್ಷದ ನಾಯಕರು ಹೊರನಡೆದರು.
ಪಂಚಮಸಾಲಿಗರ ಮೇಲೆ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದ ಪ್ರಕರಣ ತನಿಖೆಗೆ ಒತ್ತಾಯಿಸಿ ಬೆಳಗ್ಗೆ ಪರಿಷತ್ನಲ್ಲಿ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದ್ದರು. ಇದಕ್ಕೆ ಸರ್ಕಾರದ ಪರವಾಗಿ ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಪಂಚಮಸಾಲಿ ಹೋರಾಟದಲ್ಲಿ ನಮ್ಮ ದಾಖಲೆ ಪ್ರಕಾರ 11 ಜನರಿಗೆ ಗಾಯಳಾಗಿದ್ದವು. ಅವರಿಗೆ ನೀಡಬೇಕಾದ ಅಗತ್ಯ ಚಿಕಿತ್ಸೆ ನೀಡಿ ಅವತ್ತೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಹಾಗಾಗಿ, ಗಾಯಾಳುಗಳನ್ನು ಎಲ್ಲಿಯೋ ಮುಚ್ಚಿಟ್ಟಿದ್ದಾರೆ ಎಂದು ಅನುಮಾನಿಸುವ ಅಗತ್ಯವಿಲ್ಲ. ಇನ್ನು 23 ಪೊಲೀಸರಿಗೆ ಕಲ್ಲೇಟು ಬಿದ್ದಿದೆ. ಇವರಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಯಾರಿಗೂ ಆಸ್ಪತ್ರೆಗೆ ದಾಖಲಾಗುವಷ್ಟು ಗಾಯ ಆಗಿರಲಿಲ್ಲ. ಎಲ್ಲರೂ ಡಿಸ್ಚಾರ್ಜ್ ಆಗಿ ಕೆಲಸಕ್ಕೆ ಮತ್ತೆ ಹಾಜರಾಗಿದ್ದಾರೆ. ಆದ್ದರಿಂದ ಯಾವುದೇ ತನಿಖೆ ಅಗತ್ಯವಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂತು. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ವಿರೋಧಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಾಲ್ವರು ಗಾಯಾಳುಗಳು ಐಸಿಯುದಲ್ಲಿದ್ದರು. ರಾತ್ರೋರಾತ್ರಿ ಅವರನ್ನು ಬೇರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ತಿಳಿದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಆದರೆ, ನಮ್ಮ ಹಕ್ಕು ಕೇಳಿ ಪ್ರತಿಭಟಿಸುವಾಗ ಈ ರೀತಿ ಲಾಠಿ ಚಾರ್ಜ್ ಮಾಡಿದ್ದು ಸರಿಯಲ್ಲ. ನಮ್ಮ ಮೇಲೆ ಗೋಲಿಬಾರ್ ಮಾಡಲೂ ಸರ್ಕಾರ ಸಿದ್ಧವಾಗಿತ್ತು ಎಂದು ಪಂಚಮಸಾಲಿ ಸ್ವಾಮೀಜಿ ಹೇಳಿದ್ದಾರೆ. ಹಾಗಾಗಿ, ಸರ್ಕಾರ ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ಸಿ ಟಿ ರವಿ ಮಾತನಾಡಿ, ಪಂಚಮಸಾಲಿ ಹೋರಾಟ ಏಕಾಏಕಿ ಶುರುವಾಗಿದ್ದಲ್ಲ. ಸರ್ಕಾರವೇ ಅನುಮತಿ ನೀಡಿದೆ. ಅಲ್ಲದೇ ನಾಲ್ಕೈದು ವರ್ಷಗಳಿಂದ ನಡೆಯುತ್ತಿರುವ ಹೋರಾಟವಿದು. ಹಾಗಾಗಿ, ಮೊನ್ನೆ ಮಾಡಿರುವ ಲಾಠಿ ಚಾರ್ಜ್ ಸಮರ್ಥಿಸಿಕೊಂಡಿದ್ದಿರಿ. ಲಾಠಿ ಚಾರ್ಜ್ಗೆ ಮ್ಯಾಜಿಸ್ಟ್ರೇಟ್ ನೀಡಿದ್ದರಾ? ಅಶ್ರುವಾಯು ಪ್ರದರ್ಶಿಸಿಲ್ಲ. ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಇನ್ನು ಲಾಠಿ ಚಾರ್ಜ್ ಸಮರ್ಥಿಸಿಕೊಂಡು, ತನಿಖೆ ಮಾಡುವ ಅಗತ್ಯವಿಲ್ಲ ಎನ್ನುವುದು ಸರ್ವಾಧಿಕಾರಿ ಮನೋಭಾವನೆ ಆಗುತ್ತದೆ. ಪಂಚಮಸಾಲಿಗರು ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಬಂದಿರಲಿಲ್ಲ. ಮಾರಕಾಸ್ತ್ರಗಳನ್ನು ತೆಗೆದುಕೊಂಡು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದವರಿಗೆ ಅಮಾಯಕರು ಎನ್ನುತ್ತಿರಿ. ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದಿರಿ ಎಂದು ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ಡಾ. ಜಿ.ಪರಮೇಶ್ವರ, ನ್ಯಾಯಾಂಗ ತನಿಖೆ ಅಥವಾ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದರು. ಶಾಂತಿಯುತ ಪ್ರತಿಭಟನೆಗೆ ಪಂಚಮಸಾಲಿಗರಿಗೆ ಅವಕಾಶ ಕೊಟ್ಟಿದ್ದೆವು. ಹೈಕೋರ್ಟ್ ಆದೇಶವನ್ನು ಪಾಲಿಸಿದ್ದೇವೆ. ಪ್ರತಿಭಟನೆಗೆ ವೇದಿಕೆ ಕಲ್ಪಿಸಿದ್ದೆವು. ಸಿಎಂ ಮೂವರು ಸಚಿವರನ್ನು ಕಳಿಸಿಕೊಟ್ಟಿದ್ದರು. ಆದರೆ, ಮುಖ್ಯಮಂತ್ರಿಯೇ ಬರಲಿ ಎನ್ನುತ್ತಾರೆ. ಕೊನೆಗೆ ಹತ್ತು ಜನರು ಶಾಂತಿಯುತವಾಗಿ ಸಿಎಂ ಬಳಿ ಬರುವಂತೆ ಮನವಿ ಮಾಡಲಾಗುತ್ತದೆ. ಆಗ ಸ್ವಾಮೀಜಿ ನಡೆಯಿರಿ ಸುವರ್ಣ ವಿಧಾನಸೌಧಕ್ಕೆ ಎನ್ನುತ್ತಾರೆ. 10 ಸಾವಿರ ಜನ ಸೌಧಕ್ಕೆ ಮುತ್ತಿಗೆ ಹಾಕಿದರೆ ಏನು ಮಾಡುವುದು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದಿಲ್ಲವೇ..? ಆದ್ದರಿಂದ ನ್ಯಾಯಾಂಗ ತನಿಖೆ ಸೇರಿ ಯಾವುದೇ ತನಿಖೆ ಅವಶ್ಯಕತೆ ಇಲ್ಲ ಎಂದು ಮತ್ತೆ ಗೃಹ ಸಚಿವರು ಹೇಳುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ, ಕಲಾಪ ಬಹಿಷ್ಕರಿಸಿ ಸದನದದಿಂದ ಹೊರನಡೆದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕೂಡಲೇ ಕ್ಷಮೆ ಕೇಳಬೇಕು : ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯ
ಇದನ್ನೂ ಓದಿ: ₹150 ಕೋಟಿ ಆಮಿಷ ಆರೋಪ: ಸಿಬಿಐಗೆ ವಹಿಸಲು ವಿಜಯೇಂದ್ರ ಸವಾಲು: ಕಾಂಗ್ರೆಸ್ - ಬಿಜೆಪಿ ವಾಕ್ಸಮರ