ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಗರಣಗಳಿಂದಾಗಿ ಕೋಮಾ ಸ್ಥಿತಿಗೆ ಹೋಗಿದ್ದು, ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ, ಅಭಿವೃದ್ಧಿ ಕಾರ್ಯಗಳಿಗೆ ಇಷ್ಟು ತೊಡಕಾಗುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ಅದಕ್ಕೆ ಪ್ರತ್ಯೇಕ ಪರಿಹಾರ ನೀಡಲು ಸರ್ಕಾರ ಮುಂದಾಗಿಲ್ಲ. ಮಳೆಯಿಂದಾಗಿ ಎಲ್ಲ ಕಡೆ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳಲ್ಲಿ ಸುಲಲಿತವಾಗಿ ಓಡಾಡುವ ಗ್ಯಾರಂಟಿಯನ್ನು ಸರ್ಕಾರ ನೀಡಬೇಕು. ಹಗರಣಗಳಿಂದಾಗಿ ಸರ್ಕಾರ ಕೋಮಾ ಸ್ಥಿತಿಗೆ ಹೋಗಿದ್ದು, ಎಲ್ಲರೂ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕಮಿಷನ್ ಆಸೆಗಾಗಿ ಗುತ್ತಿಗೆದಾರರಿಗೆ ಕೊಡಬೇಕಿರುವ 1,500 ಕೋಟಿ ರೂ. ತಡೆಹಿಡಿದಿದ್ದು, ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಇದು ಕಾಸಿಲ್ಲದ ಬ್ರ್ಯಾಂಡ್ ಬೆಂಗಳೂರಾಗಿದೆ ಎಂದು ದೂರಿದರು.
ಕನ್ನಡ ಭಾಷಾಂತರ ಮಾಡುವ ಯೋಗ್ಯತೆ ಇಲ್ಲವೇ?: ಕೆಪಿಎಸ್‌ಸಿಯಲ್ಲಿ ಕನ್ನಡ ಭಾಷಾಂತರ ಮಾಡಲು ಕೂಡ ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಅಂತಹವರ ಆಡಳಿತದಲ್ಲೇ ಕನ್ನಡ ಪ್ರಶ್ನೆಪತ್ರಿಕೆ ನೀಡಲು ಸಾಧ್ಯವಾಗಿಲ್ಲ. ಮುಡಾ, ವಾಲ್ಮೀಕಿ ನಿಗಮದ ಹಗರಣದ ಒತ್ತಡದಿಂದಾಗಿ ಕೆಪಿಎಸ್‌ಸಿಯಲ್ಲಿ ಪರೀಕ್ಷೆ ನಡೆಸಲು ಕೂಡ ಸಾಧ್ಯವಾಗಿಲ್ಲ. ಪರೀಕ್ಷೆ ರದ್ದು ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಕಳೆದ ಬಾರಿ ಪರೀಕ್ಷೆ ಬರೆದವರಿಗೆ ಈ ಬಾರಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ಈ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಬಂದ ಬಳಿಕ ಅತ್ಯಾಚಾರ, ಮಹಿಳಾ ದೌರ್ಜನ್ಯ ಹೆಚ್ಚಿದೆ. ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ಹಿಂದಿರುವ ಮಾದಕ ದ್ರವ್ಯ ಜಾಲದ ಬಗ್ಗೆ ಕಾರ್ಕಳ ನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಇದರ ಹಿಂದೆ ದೊಡ್ಡ ಡ್ರಗ್ಸ್ ಜಾಲವೇ ಇದೆ. ಬಿಜೆಪಿ ಸರ್ಕಾರ ಇದ್ದಾಗ ವಿಶೇಷ ಅಭಿಯಾನ ನಡೆಸಿ ಡ್ರಗ್ಸ್ ನಿಯಂತ್ರಣ ಮಾಡಲಾಗಿತ್ತು. ಈ ಸರ್ಕಾರ ಡ್ರಗ್ಸ್ ದಂಧೆಕೋರರಿಗೆ ಅನುಮತಿ ನೀಡಿದೆ. ಇದರಿಂದಾಗಿ ಯುವತಿ ಮೇಲೆ ಅತ್ಯಾಚಾರವಾಗಿದೆ ಎಂದು ದೂರಿದರು.
ರೀಲ್ಸ್‌ಗೆ ಹಣ ಖರ್ಚು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಂಗನವಾಡಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಿಲ್ಲ. ಆದರೆ ರೀಲ್ಸ್ ಮಾಡಲು 60 ರಿಂದ 70 ಕೋಟಿ ರೂ. ನೀಡುತ್ತಿದ್ದಾರೆ. ಅದೇ ಹಣದಲ್ಲಿ ಶಾಲೆಗಳ ದುರಸ್ತಿ ಮಾಡಬಹುದಿತ್ತು ಎಂದರು.
ಛಲವಾದಿ ನಾರಾಯಣಸ್ವಾಮಿ ಅವರು ಮಾಡಿರುವ ಆರೋಪಕ್ಕೆ ಸರ್ಕಾರ ಉತ್ತರ ನೀಡಬೇಕಿತ್ತು. ಅದನ್ನು ಬಿಟ್ಟು ಆರೋಪದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕೋವಿಡ್ ವಿಚಾರದಲ್ಲೂ ತನಿಖಾ ಆಯೋಗ ಮಾಡಿದ್ದು, ಅರ್ಧದಲ್ಲೇ ವರದಿ ಪಡೆದು ದ್ವೇಷ ರಾಜಕಾರಣ ಮಾಡಲಾಗಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗಲೇ ಇದರ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು ಎಂದು ಹೇಳಿದರು.
ಜಾತಿಯಡಿ ರಕ್ಷಣೆ ಬೇಡ: ನಿರ್ದಿಷ್ಟ ಜಾತಿಗಳು ಕೊಲೆ, ಭ್ರಷ್ಟಾಚಾರ ಮಾಡಿದರೆ ಅವರ ವಿರುದ್ಧ ಮಾತಾಡಬಾರದು ಎಂಬ ಕಾನೂನನ್ನು ಕಾಂಗ್ರೆಸ್ ತರಲಿ ಎಂದು ವ್ಯಂಗ್ಯವಾಡಿದ ಆರ್.ಅಶೋಕ್, ತಪ್ಪು ಮಾಡುವಲ್ಲಿ ಹಿಂದುಳಿದ ವರ್ಗದವರು, ಬ್ರಾಹ್ಮಣರು, ದಲಿತರು ಎಂಬ ವರ್ಗ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಈ ರೀತಿಯ ಭಿನ್ನತೆ ತಂದಿಲ್ಲ. ಜಾತಿಗೂ ಕಾನೂನಿಗೂ ಸಂಬಂಧವಿಲ್ಲ. ಜಾತಿಯಡಿ ರಕ್ಷಣೆ ಪಡೆಯಲು ಹೋದರೆ ಜನರು ಒಪ್ಪುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾದ 14 ಸೈಟುಗಳು ಏಕೆ ಬೇಕಿತ್ತು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ಇದನ್ನು ವಿರೋಧಿಸಿದರೆ ಹಿಂದುಳಿದ ನಾಯಕನನ್ನು ಗುರಿ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಕ್ಕೆ ನಿಂದಿಸಲಾಗುತ್ತಿದೆ. ತಪ್ಪೇ ಮಾಡಿಲ್ಲ ಎಂದರೆ ಆಯೋಗವನ್ನು ಏಕೆ ನೇಮಕ ಮಾಡಿದ್ದಾರೆ? ತಪ್ಪಿತಸ್ಥರಾದ ಮುಖ್ಯಮಂತ್ರಿಯೇ ಆಯೋಗ ನೇಮಕ ಮಾಡಲು ಕಾನೂನಲ್ಲಿ ಅವಕಾಶವಿದೆಯೇ? ಎಂದು ಪ್ರಶ್ನಿಸಿದರು.
50:50ರ ಅನುಪಾತದಲ್ಲಿ ನಿಯಮ ಬಾಹಿರವಾಗಿ ನಿವೇಶನ ವಿತರಿಸಿರುವ ಅಂಶವನ್ನು ಪ್ರಮುಖವಾಗಿ ಪರಿಗಣಿಸಿ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ಪತ್ನಿಗೆ ಪೂರ್ವಾನ್ವಯವಾಗುತಂತೆ 50:50 ಅನುಪಾತದಲ್ಲಿ ನೀಡಿರುವುದೂ ಸಹ ತಪ್ಪು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂದರು.
ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಹಿಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ತಾಂತ್ರಿಕ ಸಮಿತಿ ಮುಡಾ ಅಕ್ರಮದ ಬಗ್ಗೆ ವರದಿ ನೀಡಿ 10 ತಿಂಗಳು ಕಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತನಿಖೆ ನಡೆಯುತ್ತಿದ್ದರೂ ತಪ್ಪಿತಸ್ಥ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಈಗ ದಿಢೀರನೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಮುಡಾ ಹಗರಣ ಬಯಲಿಗೆ ಬಂದಾಗಿನಿಂದ ಗಲಿಬಿಲಿಗೊಂಡಿದ್ದಾರೆ, ಮಂಕಾಗಿದ್ದಾರೆ, ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಸ್ವ ಪಕ್ಷದವರೇ ಹೇಳುತ್ತಿದ್ದಾರೆ. ಈಗಲಾದರೂ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಅಧಿಕಾರದಿಂದ ನಿರ್ಗಮಿಸಬೇಕು. ತಮ್ಮ ಗೌರವ ಕಾಪಾಡಿಕೊಳ್ಳುವುದರ ಜೊತೆಗೆ ರಾಜ್ಯದ ಗೌರವವನ್ನೂ ಉಳಿಸಬೇಕು ಎಂದು ಆಗ್ರಹಿಸಿದರು.