ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ರಂಗೇರಿದೆ. ಗೆಲುವಿಗಾಗಿ ಕೈ - ಕಮಲ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಬಿಜೆಪಿಯಿಂದ ಗಾಯಿತ್ರಿ ಸಿದ್ದೇಶ್ವರ್, ಕಾಂಗ್ರೆಸ್ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆಯಲ್ಲಿದ್ದು, ಉಭಯ ಪಕ್ಷಗಳಿಂದ ಮಹಿಳಾ ಮಣಿಗಳೇ ಕಣದಲ್ಲಿರುವುದರಿಂದ ಕ್ಷೇತ್ರದ ಕುತೂಹಲ ತುಸು ಹೆಚ್ಚೇ ಇದೆ.
ಸದ್ಯಕ್ಕೆ ಜನರ ನಾಡಿಮಿಡಿತ ನಿಗೂಢವಾಗಿರುವುದರಿಂದ ಅಭ್ಯರ್ಥಿಗಳ ನಡುವಿನ ಹೋರಾಟ ನೇರಾನೇರ ಇದೆ. ಮೇ 07ರಂದು ಮತದಾನ ನಡೆಯಲಿದ್ದು ಫಲಿತಾಂಶದ ದಿನ ಎಲ್ಲ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ. ಸದ್ಯಕ್ಕೆ ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ಪ್ರಭಾವವನ್ನೇ ನಂಬಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್, ಪ್ರಧಾನಿ ಮೋದಿ ಸರ್ಕಾರದ ಸಾಧನೆ ಹಾಗೂ ಹಾಲಿ ಸಂಸದರಾದ ತಮ್ಮ ಪತಿ ಜಿ.ಎಂ. ಸಿದ್ದೇಶ್ವರ್ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮದೇ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಜೊತೆಗೆ ಪತಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ತಮಗೆ ಶ್ರೀರಕ್ಷೆಯಾಗಲಿವೆ ಎಂಬ ವಿಶ್ವಾಸದಲ್ಲಿದ್ದಾರೆ.
ಕ್ಷೇತ್ರದ ಮತದಾರರು ಹೇಳುವುದೇನು?: ಕ್ಷೇತ್ರದಲ್ಲಿ ಉಭಯ ಅಭ್ಯರ್ಥಿಗಳು ಸಮಬಲ ಸಾಧಿಸುತ್ತಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟದಲ್ಲಿ ತೊಡಗಿದ್ದಾರೆ. ಈ ಬಾರಿ ಯಾರೇ ಗೆದ್ದರೂ ಕೈಗಾರಿಕೆಗಳ ಸ್ಥಾಪನೆ, ವಿಮಾನ ನಿಲ್ದಾಣ ಮಂಜೂರು, ಆರೋಗ್ಯ ಸೌಲಭ್ಯಗಳಲ್ಲಿ ಸುಧಾರಣೆ, ಉದ್ಯೋಗಾವಕಾಶ ಸೇರಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳು ಈಡೇರಿಸುವ ಹೊಣೆಗಾರಿಕೆ ಹೆಚ್ಚಿರಲಿದೆ. ಕ್ಷೇತ್ರದ ಜನರು ಕೂಡ ಅಭ್ಯರ್ಥಿಗಳ ಮೇಲೆ ಅದೇ ಭರವಸೆ ಇಟ್ಟುಕೊಂಡಿದ್ದಾರೆ.
’’ಎಸ್.ಎಂ. ಕೃಷ್ಣ ಸರ್ಕಾರ ಇದ್ದಾಗ ಹಲವರಿಗೆ ಆಶ್ರಯ ಮನೆಗಳನ್ನು ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮಾಡಿ ಕೊಟ್ಟಿದ್ದಾರೆ. ಅಲ್ಲಿಂದ ಇಲ್ಲಿ ತನಕ ಯಾವುದೇ ಆಶ್ರಯ ಮನೆಗಳನ್ನು ಕೊಡಲು ಸಾಧ್ಯವಾಗಿಲ್ಲ. ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲೂ ಇದೆ. ಹಾಗಾಗಿ ಕೈ ಅಭ್ಯರ್ಥಿಯ ಮೇಲೆ ಈ ಬಾರಿ ಹೆಚ್ಚು ಭರವಸೆ ಇದೆ. ಕ್ಷೇತ್ರಕ್ಕೆ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವು ಅವಶ್ಯವಿದೆ'' ಎಂದು ಹೋರಾಟಗಾರ ವಾಸು ಆವರಗೆರೆ ಎಂಬುವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತದಾರ ಹಾಲೇಶ್ ಎಂಬುವರು ಮಾತನಾಡಿ, ''ಕ್ಷೇತ್ರದಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳ ಮೇಲೆ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಉತ್ತಮ ಅಭ್ಯರ್ಥಿ. ಅದರೆ, ದೇಶಕ್ಕಾಗಿ ಮೋದಿ ಬೇಕಾಗಿದೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ. ರಾಮ ಮಂದಿರ ನಿರ್ಮಾಣ ಮಾಡಿರುವುದೇ ಬಿಜೆಪಿ ಗೆಲುವಿಗೆ ನಿದರ್ಶನ. ಹಾಲಿ ಸಂಸದ ಜಿಎಂಸಿದ್ದೇಶ್ವರ್ ಪತ್ನಿಗೆ ಟಿಕೆಟ್ ಕೊಡಲಾಗಿದೆ. ಅವರು ಗೆದ್ದು ಲೋಕಸಭೆಗೆ ಹೋದರೆ ಹಲವು ಯೋಜನೆಗಳನ್ನು ದಾವಣಗೆರೆಗೆ ತರಲಿದ್ದಾರೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
'' ಸ್ಥಳೀಯ ಅಭಿವೃದ್ಧಿ ಮತ್ತು ಪ್ರಸ್ತುತ ಸರ್ಕಾರದ ಕಾರ್ಯಗಳ ಬಗ್ಗೆ ಅಲೋಚನೆ ಮಾಡಿ ಮತದಾನ ಮಾಡಲು ಮತದಾರರು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಕಾದುನೋಡಬೇಕಿದೆ'' ಎಂದು ವಕೀಲರಾದ ಅನೀಸ್ ಪಾಷಾ ಎಂಬುವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇಶ, ರಾಜ್ಯದ ಸುರಕ್ಷತೆಗೆ ಕಾಂಗ್ರೆಸ್ ಬೆದರಿಕೆ: ಕೈ ವಿರುದ್ಧ ಅಮಿತ್ ಶಾ ವಾಗ್ದಾಳಿ - Amit Shah Roadshow