ಶಿವಮೊಗ್ಗ: ಭದ್ರಾವತಿಯ ಚನ್ನಗಿರಿ ರಸ್ತೆಯ ಗಣೇಶ ರೈಸ್ ಮಿಲ್ನಲ್ಲಿ ಗುರುವಾರ ಸಂಜೆ ನಡೆದಿದ್ದ ಸ್ಫೋಟದಲ್ಲಿ ನಾಪತ್ತೆಯಾಗಿದ್ದ ಬಾಯ್ಲರ್ ಆಪರೇಟರ್ ರಘು ಅವರ ಮೃತದೇಹ ಇಂದು ಬೆಳಗಿನ ಜಾವ ಪತ್ತೆಯಾಗಿದೆ.
ರಘು ಕಳೆದ 15 ವರ್ಷಗಳಿಂದ ಗಣೇಶ ರೈಸ್ ಮಿಲ್ನಲ್ಲಿ ಬಾಯ್ಲರ್ ಅಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ರಘು ರೈಸ್ ಮಿಲ್ ಹಿಂಭಾಗದ ಮಲ್ಲಿಕಾರ್ಜುನ ಬಡಾವಣೆಯ ನಿವಾಸಿಯಾಗಿದ್ದರು.
ಘಟನೆಯಲ್ಲಿ 7 ಜನರಿಗೆ ಗಾಯ: ಗುರುವಾರ ಸಂಜೆ 6:30ರ ಸುಮಾರಿಗೆ ನಡೆದ ಬಾಯ್ಲರ್ ಸ್ಫೋಟದಲ್ಲಿ 7 ಜನ ಗಾಯಗೊಂಡಿದ್ದರಲ್ಲದೆ, ಬಾಯ್ಲರ್ ಆಪರೇಟರ್ ರಘು ನಾಪತ್ತೆಯಾಗಿದ್ದರು. ಗಾಯಗೊಂಡವರನ್ನು ನಿನ್ನೆ ಭದ್ರಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ರಘು ಬಾಯ್ಲರ್ ಪಕ್ಕದಲ್ಲಿಯೇ ಇದ್ದ ಕಾರಣದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಫೋಟದ ಸಂದರ್ಭದಲ್ಲಿ ರಘು ಬಾಯ್ಲರ್ ಪಕ್ಕದಲ್ಲಿಯೇ ಇದ್ದರು ಎಂದು ಗಾಯಾಳುಗಳು ತಿಳಿಸಿದ್ದರು. ನಿನ್ನೆಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಜೆಸಿಬಿ ಮೂಲಕ ಹುಡುಕಾಟ ನಡೆಸಿದ್ದರು. ಇಂದು ಬೆಳಗಿನ ಜಾವ ರಘು ಬಾಯ್ಲರ್ನಿಂದ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭದ್ರಾವತಿ ರೈಸ್ ಮಿಲ್ನಲ್ಲಿ ಬಾಯ್ಲರ್ ಸ್ಫೋಟ: 8 ಮಂದಿಗೆ ಗಾಯ