ಮಂಗಳೂರು: ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದ್ದು, ಇದಕ್ಕೆ ರಾಜ್ಯಪಾಲರ ಅಂಕಿತ ಮಾತ್ರ ಬಾಕಿ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶನಿವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ತಿದ್ದುಪಡಿಯ ಪ್ರಕಾರ ವೈದ್ಯರಿಗೆ, ನರ್ಸ್ಗಳಿಗೆ ಯಾರೂ ಬಂದು ಹೆದರಿಸಬಾರದು, ನಿಂದಿಸಬಾರದು. ವಿಡಿಯೋ ಮಾಡುವುದು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದನ್ನು ಮಾಡಬಾರದು. ಇದು ಈ ತಿದ್ದುಪಡಿಯಾದ ಕಾಯ್ದೆಯಲ್ಲಿದೆ. ಇದನ್ನು ಎಲ್ಲಾ ವೈದ್ಯರು, ನರ್ಸ್ಗಳ ಸುರಕ್ಷತೆಗಾಗಿ ಮಾಡಲಾಗಿದೆ ಎಂದರು.
ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣ ಎಲ್ಲರಲ್ಲೂ ಆತಂಕ, ಗಾಬರಿಯನ್ನು ಮೂಡಿಸಿದೆ. ವೈದ್ಯರು, ಸಿಬ್ಬಂದಿಯಲ್ಲಿ ಮಹಿಳೆಯರೂ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಾರೆ. ಇದರಲ್ಲಿ ರಾತ್ರಿಯೂ ಕೆಲಸ ಮಾಡುತ್ತಾರೆ. ಈ ಬಗ್ಗೆ ಎಲ್ಲರೂ ಗಮನಹರಿಸಬೇಕಾಗಿದೆ ಎಂದರು.
ವೈದ್ಯರು, ಆಸ್ಪತ್ರೆ ಸಿಬ್ಬಂದಿ ರಾತ್ರಿಯಿಡೀ ಕೆಲಸ ಮಾಡುತ್ತಾರೆ. ಮಹಿಳಾ ಸಿಬ್ಬಂದಿ ಕೂಡ ಇರುತ್ತಾರೆ. ಎಲ್ಲರ ಸುರಕ್ಷತೆಯೂ ಮುಖ್ಯವಾಗಿದೆ. ಸುರಕ್ಷತೆ ಎನ್ನುವುದು ಆಸ್ಪತ್ರೆ ನಡೆಸುವವರ ಜವಾಬ್ದಾರಿಯೂ ಆಗಿದೆ. ಆಸ್ಪತ್ರೆ ವೈದ್ಯರು, ನರ್ಸ್, ಸಿಬ್ಬಂದಿ ಸುರಕ್ಷತೆಗೆ ಚರ್ಚಿಸಲು ಮಂಗಳವಾರ ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಅರ್ಹರಿಗೆ ಮಾತ್ರ ಗ್ಯಾರಂಟಿ ಯೋಜನೆ ಸಿಗಬೇಕು: ಸಚಿವ ದಿನೇಶ್ ಗುಂಡೂರಾವ್ - Guarantee Schemes