ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಶಿವಮೊಗ್ಗ ಸೇರಿದಂತೆ ದೇಶದ ಹಲವು ರೈಲ್ವೆ ನಿಲ್ದಾಣಗಳಲ್ಲಿ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆಗೆ ವರ್ಚುಯಲ್ ಆಗಿ ಚಾಲನೆ ನೀಡಿದ್ದಾರೆ.
ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆ ಮಳಿಗೆ ಕುರಿತು ರೈಲ್ವೆ ಇಲಾಖೆಯ ಮೈಸೂರು ವಿಭಾಗದ ಕರ್ಮಷಿಯಲ್ ಇನ್ಸ್ಪೆಕ್ಟರ್ ಜಿ.ಎನ್.ಮಂಜುನಾಥ್ ಈಟಿವಿ ಭಾರತ್ ಜೊತೆಗೆ ಮಾತನಾಡಿ, ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆಯಡಿ ಪ್ರತಿ ವ್ಯಾಪಾರಿಗೂ 15 ದಿನದ ಮಟ್ಟಿಗೆ 1 ಸಾವಿರ ರೂ ಬಾಡಿಗೆಯಂತೆ ರೈಲ್ವೆ ನಿಲ್ದಾಣದಲ್ಲಿ ಮಳಿಗೆಯನ್ನು ಬಾಡಿಗೆಗೆ ನೀಡಲಾಗುತ್ತದೆ. ಸ್ಥಳೀಯ ಉತ್ಪನ್ನಗಳು, ರೈತರ ಬೆಳೆಗಳು, ಕೈಮಗ್ಗದ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದು. ಈ ಯೋಜನೆಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ ಎಂದರು.
ಮಳಿಗೆಯ ಸದುಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮಳಿಯನ್ನು ಬಾಡಿಗೆಗೆ ಪಡೆಯಲು ಬಯಸುವ ಸಂಸ್ಥೆ ಅಥವಾ ವ್ಯಕ್ತಿ ತಮ್ಮ ಲೇಟರ್ ಪ್ಯಾಡ್ ಮೂಲಕ ಮೈಸೂರು ವಿಭಾಗದ ರೈಲ್ವೆ ಕರ್ಮಷಿಯಲ್ ವಿಭಾಗಕ್ಕೆ ಮನವಿ ಸಲ್ಲಿಸಬೇಕು. ಅವರ ಮನವಿ ಪರಿಶೀಲಿಸಿ, ಮಳಿಯನ್ನು ಬಾಡಿಗೆಗೆ ನೀಡುತ್ತಾರೆ. ಮಳಿಗೆ ಬಾಡಿಗೆ ಪಡೆದವರಿಗೆ 20 ಯೂನಿಟ್ ಕರೆಂಟ್ ಉಚಿತವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಮಳಿಗೆ ಬಾಡಿಗೆ ಪಡೆದಿರುವ ಇಳಕಲ್ ಸೀರೆಯ ಮಾರಾಟಗಾರ ದರ್ಶನ್ ಚಿನಗಾರಿ ಈಟಿವಿ ಭಾರತ್ ಜೊತೆಗೆ ಮಾತನಾಡಿ, ಇಳಕಲ್ ಸೀರೆ ಕರ್ನಾಟಕ ಸಾಂಸ್ಕೃತಿಕ ಉಡುಗೆಯಾಗಿದೆ. ನೇಕಾರರು ನೇಯ್ದ ಸೀರೆಗಳನ್ನು ಇಲ್ಲಿಗೆ ತಂದಿದ್ದೇವೆ. ನಾವು ಕೇವಲ ನೇಯುವುದಷ್ಟೇ ಅಲ್ಲದೆ, ಈಗ ಮಾರಾಟ ಮಾಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಮಳಿಗೆಯಿಂದ ಸೀರೆ ಮಾರಾಟ ಹೆಚ್ಚಾಗಿದೆ. ಮಳಿಗೆಗೆ ಬಂದು ಜನರು ಸೀರೆ ಖರೀದಿಸುತ್ತಿದ್ದಾರೆ. 15 ದಿನಕ್ಕೆ ಕೇವಲ 1 ಸಾವಿರ ರೂ ಬಾಡಿಗೆ ಇರುವುದರಿಂದ ಸೀರೆ ಮಾರಾಟ ಮಾಡಲು ನಮಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಇಳಕಲ್ ಸೀರೆ ಖರೀದಿಸಿದ ಸಂಸದ: ಇಳಕಲ್ ಸೀರೆ ಮಳಿಗೆಗೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ನಾಲ್ಕೈದು ಸೀರೆಗಳನ್ನು ಖರೀದಿಸಿದರು. ಈ ವೇಳೆ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ರುದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಯೋಜನೆಯ ಉದ್ದೇಶ: ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆಯು ಉತ್ಪಾದಕರಿಗೆ ಹಾಗೂ ಗ್ರಾಹಕರಿಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದೆ. ಕುಶಲಕರ್ಮಿಗಳು, ನೇಕಾರರು ಸೇರಿದಂತೆ ಅನೇಕರಿಗೆ ಮಾರುಕಟ್ಟೆಯನ್ನು ಇದು ಒದಗಿಸುತ್ತದೆ.
ಇದನ್ನೂ ಓದಿ: ಶಿವಮೊಗ್ಗ: ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ