ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಡಲತೀರದಲ್ಲಿ ವಿಶಿಷ್ಟ ಬದುಕಿನ ಶೈಲಿ ಹೊಂದಿರುವ ಆಲಿವ್ ರಿಡ್ಲೆ ಕಡಲಾಮೆಗಳ ಮೊಟ್ಟೆಗಳು ಪತ್ತೆಯಾಗಿವೆ. ಸುರತ್ಕಲ್ ಆಸುಪಾಸಿನ ಕಡಲತೀರದ ಮೂರು ಕಡೆಗಳಲ್ಲಿ ಈ ಅಮೆಗಳು ಬಂದು ಮೊಟ್ಟೆಯಿಟ್ಟು ಹೋಗಿರುವುದನ್ನು ಅರಣ್ಯ ಇಲಾಖೆ ಸಿಬಂದಿ ಕಂಡುಹಿಡಿದಿದ್ದಾರೆ.
ಆಲಿವ್ ರಿಡ್ಲೆ ಆಮೆಗಳ ಮೊಟ್ಟೆಗಳ ಸಂರಕ್ಷಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಆಲಿವ್ ರಿಡ್ಲೆ ಆಮೆಗಳು ಬಂದು ಮೊಟ್ಟೆ ಇರಿಸಿ ಹೋಗುವುದು ಈವರೆಗೂ ದಾಖಲಾಗುತ್ತಿತ್ತು. ಮಂಗಳೂರಿನಲ್ಲಿ ಬೀಚ್‌ಗಳಲ್ಲಿ ಮಾನವ ಚಟುವಟಿಕೆ ಹೆಚ್ಚಿರುವ ಕಾರಣ ಈವರೆಗೆ ಎಲ್ಲೂ ಕಂಡುಬರುತ್ತಿರಲಿಲ್ಲ.
ಆದರೆ, ಅರಣ್ಯ ಇಲಾಖೆ ಈ ಬಾರಿ ಮುನ್ನೆಚ್ಚರಿಕೆ ವಹಿಸಿದ್ದು, ಕಡಲ ತೀರದಲ್ಲಿ ಮೂರು ಕಣ್ಗಾವಲು ತಂಡ ರಚಿಸಿತ್ತು. ಈ ತಂಡದವರು ರಾತ್ರಿ ಕಡಲ ತೀರದಲ್ಲಿ ಕಾವಲು ನಡೆಸುತ್ತಿದ್ದರು. ಮಾನವ ಚಟುವಟಿಕೆಗಳ ಮೇಲೆ ನಿಯಂತ್ರಣವಿದ್ದ ಕಾರಣ ಮೂರು ಕಡೆಗಳಲ್ಲಿ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆ ಇರಿಸಿರುವುದು ಗೊತ್ತಾಗಿದೆ. ಅವುಗಳಲ್ಲಿ ಎರಡು ಕಡೆ ಉಬ್ಬರದಲೆಗಳು ಬಡಿಯುವ ಕಾರಣ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
ರಾತ್ರಿ ವೇಳೆ ಮೊಟ್ಟೆ ಇಡುವ ಆಲಿವ್ ರಿಡ್ಲೆ ಆಮೆ: ಆಲಿವ್ ರಿಡ್ಲೆ ಆಮೆ ನಾಚಿಕೆ ಸ್ವಭಾವ ಹಾಗೂ ನಿಧಾನವಾಗಿ ಸಂಚರಿಸುವ ಗುಣವುಳ್ಳದ್ದು. ಮಧ್ಯರಾತ್ರಿ ಅಥವಾ ಮುಂಜಾವು ತೀರಕ್ಕೆ ದೊಡ್ಡ ಅಲೆಗಳ ಸಂದರ್ಭದಲ್ಲಿ ಒಟ್ಟಿಗೆ ಬಂದು ಮೊಟ್ಟೆ ಇರಿಸಿ ಮರಳುತ್ತವೆ. ಅಚ್ಚರಿ ಎಂದರೆ, ಹೀಗೆ ಮೊಟ್ಟೆ ಇರಿಸಿದ ಬಳಿಕ ಅವು ಇತ್ತ ಕಡೆ ಬರುವುದೇ ಇಲ್ಲ. ಮೊಟ್ಟೆಗಳು ತಾವಾಗಿ ಒಡೆದು ಮರಿಯಾಗುತ್ತವೆ.
ಉಬ್ಬರದಲೆಗಳು ಬಡಿದರೆ ಮೊಟ್ಟೆಗಳು ಶಿಲೀಂಧ್ರದ ಸೋಂಕಿಗೊಳಗಾಗಿ ಹಾಳಾಗುವ ಸಾಧ್ಯತೆ ಇರುವುದರಿಂದ ಅವುಗಳನ್ನು ಪ್ರತ್ಯೇಕಿಸಿ ಅದೇ ಜಾಗದ ಮರಳನ್ನೇ ತಂದು ಅಷ್ಟೇ ಹೊಂಡ ಮಾಡಿ ಇರಿಸಲಾಗಿದೆ. ಬಳಿಕ ಮರಳು ಮುಚ್ಚಲಾಗಿದೆ. ಅದರ ಮೇಲೆ ನಾಯಿಗಳು, ಮನುಷ್ಯರು ಹೋಗಿ ಹಾಳು ಮಾಡದಂತೆ ಮೆಷ್ ಹಾಕಿ ಸುರಕ್ಷತೆ ಒದಗಿಸಲಾಗಿದೆ. ಮೊಟ್ಟೆ ಒಡೆದು ಮರಿಯಾಗುವುದಕ್ಕೆ ಸುಮಾರು 45 ದಿನ ಕಾಲಾವಕಾಶದ ಅಗತ್ಯವಿದೆ.
ಡಿಸಿಎಫ್ ಆ್ಯಂಟನಿ ಮರಿಯಪ್ಪ ಮಾತನಾಡಿ, ''ಕಡಲಾಮೆ ಮೊಟ್ಟೆಗಳ ಸಂರಕ್ಷಣೆ ಬಗ್ಗೆ ಕಡಲ ಕಿನಾರೆಯ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ಕಣ್ಣಾವಲು ತಂಡದಲ್ಲಿ ಸ್ಥಳೀಯರೇ ಇದ್ದಾರೆ. ಇಂತಹ ಕಡಲಾಮೆ ಮೊಟ್ಟೆ ಇರಿಸಿದ್ದನ್ನು ಪತ್ತೆ ಮಾಡಿ ತಿಳಿಸಿದರೆ ಬಹುಮಾನವನ್ನೂ ಘೋಷಿಸಲಾಗಿದೆ. ಹಿಂದೆ ಇದರ ಬಗ್ಗೆ ನಮ್ಮ ಸಿಬಂದಿಗೇ ಸರಿಯಾದ ಮಾಹಿತಿ ಇರಲಿಲ್ಲ. ಈಗ ಅವರಲ್ಲಿ ಕೂಡ ಉತ್ಸಾಹ ಇದೆ".
"ಆಲಿವ್ ರಿಡ್ಲೆ ಕಡಲಾಮೆಗಳು ಮೊಟ್ಟೆ ಇರಿಸಿದ್ದನ್ನು ನಮ್ಮ ಕಡೆ ಪತ್ತೆ ಮಾಡುವುದು ಕಷ್ಟ. ಒಡಿಶಾದಲ್ಲಿ ಕಡಲ ತೀರಕ್ಕೆ ಸಾಮೂಹಿಕವಾಗಿ ಈ ಆಮೆಗಳು ಬಂದು ಮೊಟ್ಟೆ ಇಡುತ್ತವೆ. ಆದರೆ, ನಮ್ಮ ಕರಾವಳಿಯಲ್ಲಿ ಕೆಲವೇ ಆಮೆಗಳು ಬಂದು ಎಲ್ಲೋ ಒಂದು ಕಡೆ ಮೊಟ್ಟೆ ಇಡುವುದರಿಂದ ಅವುಗಳನ್ನು ಹುಡುಕಿ ಸಂರಕ್ಷಿಸುವುದು ಸವಾಲು. ಸದ್ಯ ಮೂರು ಕಡೆ ಮೊಟ್ಟೆಗಳು ಪತ್ತೆಯಾಗಿದ್ದು ಸಂರಕ್ಷಿಸುತ್ತಿದ್ದೇವೆ'' ಎಂದರು.
ಒಂದು ಆಮೆ ಒಮ್ಮೆಗೆ 100ರಷ್ಟು ಮೊಟ್ಟೆ ಇಡುತ್ತದೆ. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್‌ನಲ್ಲಿ ಮೊಟ್ಟೆ ಇಡುತ್ತೆಯಾದರೂ ಹವಾಮಾನ ಬದಲಾವಣೆಯಾಗುತ್ತಿರುವ ಕಾರಣದಿಂದಲೋ ಏನೋ ಈ ಬಾರಿ ಡಿಸೆಂಬರ್‌ನಲ್ಲಿ ಮೊದಲ ಬಾರಿ ಸುರತ್ಕಲ್‌ನಲ್ಲಿ ಪತ್ತೆಯಾಗಿವೆ. ಜನವರಿಯಲ್ಲೂ ಎರಡು ಕಡೆಗಳಲ್ಲಿ ಆಮೆಗಳ ಮೊಟ್ಟೆಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಹೀಗಿದೆ ಕಾರ್ಯಕ್ರಮದ ಸಂಪೂರ್ಣ ವಿವರ