ಬೆಂಗಳೂರು : ಹಿಟ್ ಅಂಡ್ ರನ್ಗೆ ಪಾದಚಾರಿ ವೃದ್ಧ ಮಹಿಳೆ ಬಲಿಯಾದ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಮೃತರನ್ನು ಮಹಾಲಕ್ಷ್ಮಿ ಲೇಔಟ್ ನಿವಾಸಿ ಆಶಾರಾಣಿ (60) ಎಂದು ಗುರುತಿಸಲಾಗಿದೆ.
ಶ್ರೀರಂಗಪಟ್ಟಣಕ್ಕೆ ಹೋಗಲು ಇಂದು ಬೆಳಗ್ಗೆಯೇ ಮನೆಯಿಂದ ಹೊರಟಿದ್ದ ಆಶಾರಾಣಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು. ರಸ್ತೆ ದಾಟುವಾಗ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ವೃದ್ಧೆ ಮೃತಪಟ್ಟಿದ್ದಾರೆ. ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಗೆ ಮೃತ ದೇಹವನ್ನ ರವಾನಿಸಲಾಗಿದ್ದು, ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು : ಕಳೆದು ತಿಂಗಳು ಜ.5 ರಂದು ಶುಕ್ರವಾರ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದರು. ಮಾರತ್ತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿತ್ತು. ಇಳಂಗೋವನ್ ಸೆಂಕತ್ತವಲ್ (43) ಮೃತ ಸವಾರ. ಮೃತ ಇಳಂಗೋವನ್ ಅವರು ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರು ಮಾರ್ಗವಾಗಿ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ವೊಲ್ವೋ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿತ್ತು. ಪರಿಣಾಮ ನೆಲಕ್ಕೆ ಬಿದ್ದ ಇಳಂಗೋವನ್ ತಲೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿದ್ದವು. ಗಾಯಗೊಂಡಿದ್ದ ಅವರನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜ.6 ರಂದು ಸಾವನ್ನಪ್ಪಿದ್ದರು. ಈ ಕುರಿತು ಎಚ್ಎಎಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಕಾಲೇಜು ವಿದ್ಯಾರ್ಥಿನಿ ಬೈಕ್ ಬಿಎಂಟಿಸಿ ಬಸ್ ಡಿಕ್ಕಿ : ಸ್ಕೂಟರ್ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಶ್ಚಂದ್ರ ಘಾಟ್ ಬಳಿ ಫೆ.2 ರಂದು ಬೆಳಗ್ಗೆ 8.30ರ ಸುಮಾರಿಗೆ ಜರುಗಿತ್ತು. ಕುಸುಮಿತಾ (21) ಮೃತಪಟ್ಟ ಯುವತಿ. ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕುಸುಮಿತಾ ಎಂದಿನಂತೆ ತಮ್ಮ ನಿವಾಸದಿಂದ ಕಾಲೇಜಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ, ಬಿಎಂಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಕುಸುಮಿತಾ ಕೆಳಗೆ ಬಿದ್ದಿದರಿಂದ ಅವರ ಮೇಲೆಯೇ ಬಸ್ ಹರಿದು ಸ್ಥಳದಲ್ಲೇ ಸಾವಿಗೀಡಾದ್ದರು. ಈ ಸಂಬಂಧ ಮಲ್ಲೇಶ್ವರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಸ್ಕೂಟರ್- ಬಿಎಂಟಿಸಿ ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವು: ವಿಡಿಯೋದೊಂದಿಗೆ BMTC ಸ್ಪಷ್ಟನೆ