ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರ ಪತ್ತೆಗಾಗಿ ಇಂಟರ್ಪೋಲ್ನಿಂದ ಅಧಿಕೃತವಾಗಿ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ.
ಪ್ರಜ್ವಲ್ ರೇವಣ್ಣರ ಪತ್ತೆಗಾಗಿ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಸಿಬಿಐ ಮೂಲಕ ರಾಜ್ಯ ಎಸ್ಐಟಿ ಪೊಲೀಸರು ಮನವಿ ಸಲ್ಲಿಸಿದ್ದರು. ಸಿಬಿಐ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಇಂಟರ್ಪೋಲ್ ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಿದ್ದು, ಆರೋಪಿಯ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ತನ್ನ 196 ಸದಸ್ಯ ರಾಷ್ಟ್ರಗಳಿಗೆ ಕೋರಿರುವುದಾಗಿ ತಿಳಿಸಿದೆ ಎಂದು ಸಿಐಡಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಸಿಬಿಐ ಮೂಲಕ ಎಸ್‌ಐಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು.
ಇಂಟರ್ಪೋಲ್ (ಇಂಟರ್ ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಸೇಶನ್) ಎಂಬುದು ಅಂತರ-ಸರ್ಕಾರಿ ಸಂಸ್ಥೆಯಾಗಿದ್ದು, ಅದರ ಕೇಂದ್ರ ಕಚೇರಿ ಫ್ರಾನ್ಸ್‌ನ ಲಿಯಾನ್‌ನಲ್ಲಿದೆ. ಪ್ರಸ್ತುತ 196 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಇಂಟರ್ಪೋಲ್ ತನ್ನ ಸದಸ್ಯ ರಾಷ್ಟ್ರಗಳ ತನಿಖಾ ಸಂಸ್ಥೆಗಳಿಗೆ ಅಗತ್ಯವಿರುವ ಅಪರಾಧಿಗಳು ಮಾಹಿತಿ ಅಥವಾ ಕ್ರಿಮಿನಲ್ ಡೇಟಾವನ್ನ ಪರಸ್ಪರ ಹಂಚಿಕೊಳ್ಳುವ ಒಪ್ಪಂದವನ್ನು ಹೊಂದಿದೆ.