ಹುಬ್ಬಳ್ಳಿ: ಬಸ್ನಲ್ಲಿ ಪ್ರಯಾಣಿಕರು ಬಿಟ್ಟುಹೋಗಿದ್ದ ಲ್ಯಾಪ್ ಟಾಪ್, ಪೆನ್ ಡ್ರೈವ್, ನಗದು ಹಣ ಹಾಗೂ ಪ್ರಮುಖ ದಾಖಲೆಗಳಿದ್ದ ಬ್ಯಾಗ್ನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಹೈದರಾಬಾದ್ನ ಏರೊನಾಟಿಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ವೀರಂ ಮಹೀಂದ್ರ ರೆಡ್ಡಿ ಎಂಬವರು ಅಕ್ಟೋಬರ್ 2ರಂದು ಮಧ್ಯಾಹ್ನ ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ನಲ್ಲಿ (ಕೆ.ಎ. 25 ಎಫ್ 3148) ಹುಬ್ಬಳ್ಳಿಯಿಂದ ಬೆಳಗಾವಿಗೆ ಪ್ರಯಾಣಿಸಿದ್ದರು. ಆದರೆ, ಬೆಳಗಾವಿ ಬಸ್ ನಿಲ್ದಾಣದಲ್ಲಿ ತಮ್ಮ ಬ್ಯಾಗ್ ಬಸ್ನಲ್ಲೇ ಮರೆತು ಇಳಿದಿದ್ದರು.
ಪ್ರಯಾಣಿಕರೆಲ್ಲರೂ ಇಳಿದ ಬಳಿ ಬ್ಯಾಗ್ ಗಮನಿಸಿದ ಚಾಲಕ ಕಮ್ ನಿರ್ವಾಹಕ ಎನ್.ಎಂ.ಬಿರಾದಾರ, ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಮೇಲಧಿಕಾರಿಗಳ ಸಮಕ್ಷಮದಲ್ಲಿ ಬ್ಯಾಗ್ ತೆಗೆದು ನೋಡಿದಾಗ ಅದರಲ್ಲಿ ಲ್ಯಾಪ್ ಟಾಪ್, 19,500 ರೂ. ನಗದು, ಪೆನ್ ಡ್ರೈವ್, ಮತ್ತಿತರ ಪ್ರಮುಖ ದಾಖಲೆಗಳು ಇರುವುದು ಕಂಡು ಬಂದಿತ್ತು. ಬಳಿಕ, ಬ್ಯಾಗ್ ಮರೆತು ಹೋದವರ ಮಾಹಿತಿ ಸಂಗ್ರಹಿಸಲಾಗಿದೆ. ಅದರಂತೆ, ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ವಿಭಾಗಿಯ ನಿಯಂತ್ರಣಾಧಿಕಾರಿ ಹಾಗೂ ನಿಲ್ದಾಣಾಧಿಕಾರಿಯವರ ಸಮಕ್ಷಮದಲ್ಲಿ ಚಾಲಕರ ಮೂಲಕ ಬ್ಯಾಗ್ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಧನ್ಯವಾದ ತಿಳಿಸಿದ ಪ್ರಯಾಣಿಕ: ಬ್ಯಾಗ್ ಮರಳಿ ಪಡೆದ ವೀರಂ ಮಹೀಂದ್ರ ರೆಡ್ಡಿ ಮಾತನಾಡಿ, ''ಬಸ್ ನಿಲ್ದಾಣದಿಂದ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಲುಪಿದಾಗ ಒಂದು ಬ್ಯಾಗ್ನ್ನು ಬಸ್ನಲ್ಲಿಯೇ ಮರೆತು ಬಂದಿರುವುದು ಗಮನಕ್ಕೆ ಬಂತು. ಲ್ಯಾಪ್ ಟಾಪ್, ಪಿಹೆಚ್ಡಿ ವ್ಯಾಸಂಗಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳಿದ್ದ ಪೆನ್ ಡ್ರೈವ್ ಮತ್ತು ನಗದು ಹಣ ಕಳೆದುಹೋಗಿದ್ದರಿಂದ ತುಂಬಾ ಗಾಬರಿಯಾಗಿತ್ತು. ಬಸ್ ಟಿಕೆಟ್ ಆಧಾರದ ಮೇಲೆ ಸದರಿ ಬಸ್ನ ಚಾಲಕರನ್ನು ಸಂಪರ್ಕಿಸಿದಾಗ ಬ್ಯಾಗ್ ಸಿಕ್ಕಿರುವುದು ತಿಳಿದು ಖುಷಿಯಾಯಿತು. ಎಲ್ಲ ವಸ್ತುಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಬಸ್ ಸಿಬ್ಬಂದಿಗೆ ಹೃದಯಪೂರ್ವಕ ಧನ್ಯವಾದಗಳು'' ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಪ್ರಾಮಾಣಿಕತೆ ಮೆರೆದ ಸಿಬ್ಬಂದಿಯನ್ನು ಅಭಿನಂದಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ಮಾತನಾಡಿ, ''ಚಾಲಕ ಕಂ ನಿರ್ವಾಹಕ ಎನ್.ಎಂ.ಬಿರಾದಾರ ಅವರ ಕರ್ತವ್ಯಪರತೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅವರ ಕಾರ್ಯವು ಇತರ ನೌಕರರಿಗೆ ಮಾದರಿಯಾಗಿದೆ'' ಎಂದು ಶ್ಲಾಘಿಸಿದರು. ಬಸ್ ನಿಲ್ದಾಣಾಧಿಕಾರಿ ವಿ.ಎಸ್.ಹಂಚಾಟೆ, ಸಾರಿಗೆ ನಿಯಂತ್ರಕ ಎಸ್.ವಿ.ಸಾತಪುಟೆ ಹಾಗೂ ಆರ್.ಅರ್.ಚವ್ಹಾಣ ಮತ್ತಿತರರು ಇದ್ದರು.
ಇದನ್ನೂ ಓದಿ: ಗಂಗಾವತಿ: ಬಿರುಗಾಳಿ, ಆಲಿಕಲ್ಲು ಮಳೆಗೆ ಭತ್ತ ನಾಶ; ಮನೆಗಳಿಗೆ ಹಾನಿ - Gangavathi Heavy Rain