ದಾವಣಗೆರೆ: "ರಾಮ ಮಂದಿರ ನಿರ್ಮಾಣದಿಂದ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬಂದರೆ ತಪ್ಪೇನಿಲ್ಲ" ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನಿರ್ಮಿಸಿದ್ದಾರೆ. ನಾನು ಅಯೋಧ್ಯ ರಾಮಮಂದಿರ ಟ್ರಸ್ಟ್ ಸದಸ್ಯನಾಗಿದ್ದು, ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆದ ಬಳಿಕ ಕಳೆದ 40 ದಿನಗಳ ಕಾಲ ಅಲ್ಲಿಯೇ ಕೆಲ ಪೂಜಾ ವಿಧಿವಿಧಾನಗಳನ್ನು ಮುಗಿಸಿ ರಾಮನ ನಾಡಿನಿಂದ ಇಂದು ಹನುಮನ ನಾಡಿಗೆ ಬಂದಿದ್ದೇನೆ." ಎಂದು ಹೇಳಿದರು.
"ಅಯೋಧ್ಯೆಯಂತೆ ಹನುಮನ ಪುಣ್ಯಕ್ಷೇತ್ರ ಆಂಜನಾದ್ರಿ ಬೆಟ್ಟದ ಅಭಿವೃದ್ಧಿಯೂ ಆಗಬೇಕು. ಅಯೋಧ್ಯೆಯಂತೆ ಇದಕ್ಕೊಂದು ಟ್ರಸ್ಟ್ ಮಾಡಬೇಕು. ಇತ್ತೀಚಿಗೆ ರಾಮಮಂದಿರ ದ್ವಂಸ ಮಾಡುವ ಬಗ್ಗೆ ಅನಾಮಧೇಯ ಪತ್ರಗಳು, ಈ ಮೇಲ್ಗಳು ಪತ್ತೆಯಾಗುತ್ತಿವೆ. ಶ್ರೀ ರಾಮ ಮಂದಿರವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಜಾಪ್ರಭುತ್ವ ಇರುವ ದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಇಂತಹ ಮಂದಿರಗಳ ಬಗ್ಗೆ ಅನಗತ್ಯ ಹೇಳಿಕೆ ಅಥವಾ ಪತ್ರಗಳು ಬರೆಯುವುದು ತಪ್ಪು" ಎಂದು ತಿಳಿಸಿದರು.
ಇನ್ನು ದೇವಾಲಯದ ಹಣವನ್ನು ಇತರ ಸಮುದಾಯಗಳಿಗೆ ಹಂಚುವ ಸರ್ಕಾರದ ನೀತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಹಿಂದೂ ದೇವಸ್ಥಾನಗಳ ಆದಾಯವನ್ನು ಸರ್ಕಾರ ಹಿಂದೂ ಧರ್ಮಕ್ಕೆ ಬಿಟ್ಟು ಬಿಡಬೇಕು. ಇನ್ನು ದೇವಸ್ಥಾನಗಳಲ್ಲಿ ವಿತರಣೆ ಆಗುವ ಪ್ರಸಾದವನ್ನು ಸರ್ಕಾರ ಪರೀಕ್ಷೆ ಮಾಡುವ ಬಗ್ಗೆ ಮಾತಾಡುತ್ತಿದೆ. ಆದರೆ, ದೇವಸ್ಥಾನಗಳಲ್ಲಿ ವಿತರಣೆ ಆಗುವ ಪ್ರಸಾದದ ಬಗ್ಗೆ ಮಾಹಿತಿ ಫಲಕ ಹಾಕುವುದು ಸೂಕ್ತ, ದೇವಾಲಯದ ಪ್ರಸಾದ ಪರೀಕ್ಷೆ ಏಕೆ?" ಎಂದು ಪ್ರಶ್ನಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತಾವು ಸಂಪೂರ್ಣವಾಗಿ ಸ್ವೀಕರಿಸುವುದಾಗಿ ಪೇಜಾವರ ಶ್ರೀ ಹೇಳಿದರು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖಂಡರು ಬಿಜೆಪಿಗೆ ಸೇರ್ಪಡೆ: ಬಿ. ವೈ.ವಿಜಯೇಂದ್ರ