ಬೆಂಗಳೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ವರ್ಗಾವಣೆಯಾದಾಗ ನಿಯುಕ್ತಿಗೊಂಡ ಠಾಣೆಗಳಲ್ಲಿ ಅಧಿಕಾರ ಸ್ವೀಕರಿಸಬೇಕಾದರೆ ಇನ್ನು ಮುಂದೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆಯಬೇಕು. ಒಂದು ವೇಳೆ ಎನ್ಒಸಿ ಪಡೆಯದಿದ್ದರೆ ವೇತನ ಕಡಿತವಾಗಲಿದೆ.
ವರ್ಗಾವಣೆಯಾಗಿ ರಿಲೀವ್ ಮಾಡುವಾಗ/ಹುದ್ದೆ ತೋರಿಸಿದ ಆಯಕಟ್ಟಿನ ಜಾಗದಲ್ಲಿ ಅಧಿಕಾರ ಸ್ವೀಕರಿಸುವಾಗ ಸಂಬಂಧಪಟ್ಟ ವಲಯದ ಡಿಸಿಪಿಗಳಿಂದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಸಂಬಳ ನೀಡಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೊಸ ನಿಯಮ ರೂಪಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್ ಹಾಗೂ ಎಸಿಪಿಗಳಿಗೆ ಮಾತ್ರ ಈ ನಿಯಮ ಅನ್ವಯ. ನಗರ ಪೊಲೀಸ್ ಆಯುಕ್ತರು ಪೊಲೀಸ್ ಠಾಣೆಗಳ ಪರಿವೀಕ್ಷಣೆ ವೇಳೆ ವೀಕ್ಷಣೆ ಇಲಾಖೆ ನೀಡಿದ ಸಿಮ್, ಸರ್ವೀಸ್ ಪಿಸ್ತೂಲ್, ವಾಹನ ಸೇರಿದಂತೆ ಇನ್ನಿತರ ಸಾಧನ-ಸಲಕರಣೆಗಳನ್ನು ಅಧಿಕಾರ ಸ್ವೀಕರಿಸುವ ಅಧಿಕಾರಿಗಳಿಗೆ ನೀಡಬೇಕೆಂಬುದು ನಿಯಮ. ಆದರೆ ಈ ನಿಯಮವನ್ನು ಗಾಳಿಗೆ ತೂರಿ ಉಲ್ಲಂಘನೆ ಮಾಡಿರುವುದು ಕಂಡುಬಂದಿತ್ತು.
ಅಲ್ಲದೆ ಪ್ರಕರಣದ ತ್ವರಿತಗತಿ ತನಿಖೆಗಾಗಿ ಹಳೆ ಕೇಸ್ಗಳ ಪೆಂಡಿಂಗ್ ಮಾಹಿತಿ ನೀಡದಿರುವುದು, ಯಾವ ಕಾರಣಕ್ಕಾಗಿ ತನಿಖೆಯಲ್ಲಿ ಹಿಂದುಳಿದಿರುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ತನಿಖೆ ವೇಳೆ ವಶಪಡಿಸಿಕೊಂಡ ನಗದು, ವಸ್ತು ಸೇರಿದಂತೆ ಇನ್ನಿತರ ಪರಿಕರಗಳನ್ನು ಒಪ್ಪಿಸಬೇಕು. ಇವೆಲ್ಲವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಬಳಿಕವಷ್ಟೇ ಎನ್ಒಸಿ ಪಡೆಯಲು ಅರ್ಹರಾಗುತ್ತಾರೆ.
ಎನ್ಒಸಿ ಪಡೆಯದಿದ್ದಲ್ಲಿ ಯಾವುದೇ ಕಾರಣಕ್ಕೂ ಸಂಬಳ ಬರುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬ್ಯಾಟರಾಯಪುರ ಇನ್ಸ್ಪೆಕ್ಟರ್ ಆಗಿದ್ದ ಶಂಕರ್ ನಾಯಕ್ ಅವಧಿಯಲ್ಲಿ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದಿದ್ದ 72 ಲಕ್ಷ ಹಣವನ್ನು ಖಜಾನೆಯಲ್ಲಿ ಇಡದೆೇ ಸ್ವಂತ ಬಳಕೆಗೆ ಉಪಯೋಗಿಸಿ ದುರ್ಬಳಕೆ ಮಾಡಿದ ಆರೋಪ ಕೇಳಿಬಂದಿತ್ತು.
ಅಕ್ರಮವೆಸಗಿರುವುದು ಹಿರಿಯ ಅಧಿಕಾರಿಗಳಿಗೆ ಗೊತ್ತಾಗುತ್ತಿದ್ದಂತೆ ಆರೋಪಿತ ಇನ್ಸ್ಪೆಕ್ಟರ್, ವಾಮಮಾರ್ಗದಲ್ಲಿ ಬಂದು ಠಾಣೆಗೆ ಬಂದು ಚೀಲದಲ್ಲಿ ಹಣ ಇಟ್ಟು ಹೋಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಂಚನೆ, ನಂಬಿಕೆದ್ರೋಹ ಆಧಾರದ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದೇ ರೀತಿ ನಗರ ಪೊಲೀಸ್ ಆಯುಕ್ತರು ಠಾಣಾ ಮಟ್ಟದಲ್ಲಿ ಪರಿವೀಕ್ಷಣೆ ನಡೆಸುವಾಗ ಹಲವರು ಇಲಾಖೆ ನೀಡಿದ ಸಾಧನಗಳನ್ನ ವಾಪಸ್ ನೀಡದಿರುವುದು ಕಂಡುಬಂದಿತ್ತು. ಅಲ್ಲದೆ ಪೆಂಡಿಂಗ್ ಕೇಸ್ಗಳ ಬಗ್ಗೆ ಮಾಹಿತಿ ನೀಡದಿರುವುದು ಗೊತ್ತಾಗಿತ್ತು. ಇದರಿಂದ ಪ್ರಕರಣಗಳ ತನಿಖೆ ವೇಳೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಹೀಗಾಗಿ ನಗರ ಪೊಲೀಸ್ ಆಯುಕ್ತರು ಎನ್ಒಸಿ ವ್ಯವಸ್ಥೆ ಜಾರಿಗೆ ತಂದಿದ್ದಾರೆ.
ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯಿಸಿದ್ದು, ''ಪೊಲೀಸ್ ಠಾಣೆಗಳ ಪರಿವೀಕ್ಷಣೆ ವೇಳೆ ಅಪರಾಧ ಪ್ರಕರಣಗಳಲ್ಲಿ ಜಪ್ತಿಯಾದ ವಸ್ತುಗಳ ನಿರ್ವಹಣೆಯಲ್ಲಿ ಲೋಪವೆಸಗಿರುವುದು ಕಂಡು ಬಂದಿತ್ತು. ಸರ್ವಿಸ್ ರೆಕಾರ್ಡ್ ಬುಕ್ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಇನ್ನುಂದೆ ವರ್ಗಾವಣೆಯಾಗಿ ಅಧಿಕಾರ ಸ್ವೀಕರಿಸುವವರು ಕಡ್ಡಾಯವಾಗಿ ಎನ್ಒಸಿ ಪಡೆಯಬೇಕಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ: ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್