ಬೆಂಗಳೂರು: "ನಮ್ಮ ಕಾನೂನು, ಸಂವಿಧಾನದಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವ ವಿಧಾನವೇ ಇಲ್ಲ. ಮಹಾರಾಷ್ಟ್ರ, ಮುಂಬೈ ಸೇರಿದಂತೆ ಎಲ್ಲಿಯೂ ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಈ ಕುರಿತು ಜನರಿಗೆ ಸಾಮಾನ್ಯ ಜ್ಞಾನ ಇರಬೇಕು" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳಿಂದ ಅಮಾಯಕರು ಹಣ ಕಳೆದುಕೊಳ್ಳುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, "ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಈ ಬೆದರಿಕೆ ಕರೆಗಳ ಕುರಿತು ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ" ಎಂದರು.
ಡಿಜಿಟಲ್ ಅರೆಸ್ಟ್ ಎಂಬ ಪದ್ಧತಿ ನಮ್ಮ ಕಾನೂನಿನಲ್ಲಿಲ್ಲ: "ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿಗೆ ನೋಟಿಸ್ ನೀಡಿ ಅಥವಾ ನೇರವಾಗಿ ಅವರನ್ನು ಭೇಟಿಯಾಗಿ ವಶಕ್ಕೆ ಪಡೆದು ಬಳಿಕ ಬಂಧಿಸುವ ಪದ್ಧತಿಯಿದೆ. ಬಂಧಿಸಿದ ಆರೋಪಿಯನ್ನು 24 ಗಂಟೆಗಳೊಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂಬ ಕಠಿಣ ಕಾನೂನಿದೆ. ಆದರೆ ಡಿಜಿಟಲ್ ಅರೆಸ್ಟ್ ಎಂಬ ಪದ್ಧತಿ ನಮ್ಮ ಕಾನೂನಿನಲ್ಲಿ ಇಲ್ಲ. ಸಾರ್ವಜನಿಕರು ಸ್ವಲ್ಪ ಮಟ್ಟಿನ ಕಾನೂನಿನ ಅರಿವು ಹೊಂದಿದರೆ ವಂಚಕರ ಜಾಲದಲ್ಲಿ ಸಿಲುಕುವ ಪ್ರಮೇಯವೇ ಬರುವುದಿಲ್ಲ. ಅನುಮಾನಾಸ್ಪದ ಕರೆಗಳು ಬಂದಾಗ ಸಮೀಪದ ಪೊಲೀಸ್ ಠಾಣೆಗೆ ಒಂದು ಕರೆ ಮಾಡಿದರೂ ಸಹ ಸೂಕ್ತ ಮಾಹಿತಿ ನೀಡಲಾಗುತ್ತದೆ" ಎಂದು ತಿಳಿಸಿದರು.
ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಿ: "ಸರ್ಕಾರದ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕರೆಯ ಮೂಲಕ ತನಿಖೆ ಕೈಗೊಳ್ಳುವುದಿಲ್ಲ. ಮೊದಲು ನೋಟಿಸ್ ನೀಡಿ ಇಲ್ಲವೇ ನೇರವಾಗಿ ಬಂದು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತವೆ. ಆದ್ದರಿಂದ ಮೊಬೈಲ್ ಕರೆಗಳ ಮೂಲಕ ಯಾರಾದ್ರೂ ಸಂಪರ್ಕಿಸಿ ಡಿಜಿಟಲ್ ಅರೆಸ್ಟ್ ಅಂತಾ ಬೆದರಿಕೆ ಹಾಕಿದರೆ ಜನರು ಎಚ್ಚೆತ್ತುಕೊಂಡು ಸ್ಥಳೀಯ ಪೊಲೀಸರಿಗೆ ತಿಳಿಸುವುದು ಸೂಕ್ತ" ಎಂದರು.
₹109 ಕೋಟಿ ವಂಚಕರ ಪಾಲು!: 2024ರ ನವೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 641 ಡಿಜಿಟಲ್ ಅರೆಸ್ಟ್ ಪ್ರಕರಣಗಳು ವರದಿಯಾಗಿದ್ದು, 109 ಕೋಟಿ ರೂ. ವಂಚಕರ ಪಾಲಾಗಿದೆ. ಆ ಪೈಕಿ ಬೆಂಗಳೂರಲ್ಲೇ 480 ಪ್ರಕರಣಗಳು ವರದಿಯಾಗಿದ್ದು, 42.4 ಕೊಟಿ ರೂ ಹಣವನ್ನು ವಂಚಕರು ಲೂಟಿ ಮಾಡಿದ್ದಾರೆ. ವಂಚಕರ ಪಾಲಾದ ಹಣದಲ್ಲಿ ಕೇವಲ 9 ಕೋಟಿ ರೂ ಮಾತ್ರ ವಾಪಸ್ ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಟೆಕ್ಕಿಗೆ ₹11 ಕೋಟಿ ವಂಚನೆ: ಇತ್ತೀಚಿಗೆ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ವಂಚಕರು ಬೆದರಿಸಿ ಒಂದು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಜಾಲದಲ್ಲಿ ಬೀಳಿಸಿ, ಅವರಿಂದ 11.83 ಕೋಟಿ ರೂ ವರ್ಗಾಯಿಸಿಕೊಂಡು ಮೋಸ ಮಾಡಿರುವ ಘಟನೆ ನಡೆದಿತ್ತು. ಹಣ ಕಳೆದುಕೊಂಡ ವಿಜಯ್ ಕುಮಾರ್ ಎಂಬವರು ನೀಡಿದ್ದ ದೂರಿನನ್ವಯ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇಲ್ಲಿಯವರೆಗೆ ರಾಜ್ಯದಲ್ಲಿ ವರದಿಯಾದ ಅತ್ಯಧಿಕ ಮೊತ್ತ ಕಳೆದುಕೊಂಡ ಡಿಜಿಟಲ್ ಅರೆಸ್ಟ್ ಪ್ರಕರಣ ಇದಾಗಿದೆ.
ಇದನ್ನೂ ಓದಿ: 11 ತಿಂಗಳಲ್ಲಿ 641 ಪ್ರಕರಣ; ಏನಿದು ಡಿಜಿಟಲ್ ಅರೆಸ್ಟ್, ಜನ ವಹಿಸಬೇಕಿರುವ ಎಚ್ಚರಿಕೆಗಳೇನು?
ಇದನ್ನೂ ಓದಿ: ಒಂದು ತಿಂಗಳು ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗೆ 11.83 ಕೋಟಿ ರೂ. ವಂಚನೆ