ಬೆಂಗಳೂರು: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) 2023 ಜಾರಿಗೆ ಬಂದ ಮೇಲೆ ಪೊಲೀಸರು ಹಿಂದಿನ ದಂಡ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳುವುದನ್ನು ಅನುಮತಿಸಲಾಗದು ಎಂದು ಹೇಳಿರುವ ಹೈಕೋರ್ಟ್, ಬಿಎನ್‌ಎಸ್‌ಎಸ್ ಜಾರಿಗೆ ಬಂದ ದಿನ 2024ರ ಜುಲೈ 1ರಂದು ಅತ್ಯಾಚಾರ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಸಿಆರ್‌ಪಿಸಿ ಅಡಿಯಲ್ಲಿ ರಾಜ್ಯದಲ್ಲಿ ದಾಖಲಾಗಿದ್ದ ಮೊದಲ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಸಿಆರ್‌ಪಿಸಿ 154 ಅಡಿಯಲ್ಲಿ ಐಪಿಸಿ ಸೆಕ್ಷನ್ 376, 323, 506 ಹಾಗೂ 420 ಅಡಿಯಲ್ಲಿ 2024ರ ಜುಲೈ 1ರಂದು ದಾಖಲಾಗಿರುವ ಎಫ್‌ಐಆರ್ ಹಾಗೂ ಲಿಂಗಸುಗೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಅರುಣ್ ಕುಮಾರ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಈ ಮಹತ್ವದ ಆದೇಶ ಮಾಡಿದೆ. ಅಲ್ಲದೆ, ವಿಚರಣಾ ನ್ಯಾಯಾಲಯಗಳು ಮತ್ತು ಪೊಲೀಸ್ ಠಾಣೆಗಳಿಗೆ ಕೆಲವು ನಿರ್ದೇಶನಗಳನ್ನು ಇದೇ ವೇಳೆ ಹೈಕೋರ್ಟ್ ನೀಡಿದೆ.
ಬಿಎನ್‌ಎಸ್‌ಎಸ್ ಜಾರಿಗೆ ಬಂದ ಮೇಲೆ ಸಿಆರ್‌ಪಿಸಿ ಸೆಕ್ಷನ್ 154ರಡಿ ಪೊಲೀಸರು ದಾಖಲಿಸಿಕೊಂಡಿದ್ದ ಎಫ್‌ಐಆರ್ ರದ್ದು ಪಡಿಸಲಾಗುತ್ತಿದೆ. ಆದರೆ, ದೂರಿನ ಗಂಭೀರತೆ ಆಧರಿಸಿ ಪ್ರಕರಣವನ್ನು ಪೊಲೀಸರಿಗೆ ಹಿಂದಿರುಗಿಸಲಾಗುತ್ತಿದ್ದು, ಸಿಆರ್‌ಪಿಸಿ ಸೆಕ್ಷನ್ 154 ಬದಲಿಗೆ ಬಿಎನ್‌ಎಸ್‌ಎಸ್ ಸೆಕ್ಷನ್ 173 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ ಬಿಎನ್‌ಎಸ್‌ಎಸ್ ಸೆಕ್ಷನ್ 193ರಡಿ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ಯಾವುದೇ ಪ್ರಕರಣದಲ್ಲಿ ಕಾನೂನು ಕ್ರಮ ಜರುಗಿಸಲು ಎಫ್‌ಐಆರ್ ಮೂಲ ದಾಖಲೆ ಆಗಲಿದೆ. ಅಲ್ಲದೇ ಆರೋಪಿತರ ವಿರುದ್ದ ದಾಖಲಾಗಿರುವ ದೂರಿನ ತನಿಖೆಗೆ ಎಫ್‌ಐಆರ್ ತಳಹದಿ ಆಗಿರುತ್ತದೆ. ಆದರೆ, ಬಿಎನ್‌ಎಸ್‌ಎಸ್ ಸೆಕ್ಷನ್ 176ರ ಅಡಿ ಬರುವ ಪ್ರಕರಣವನ್ನು ಸಿಆರ್‌ಪಿಸಿ ಸೆಕ್ಷನ್ 154ರಡಿ ತನಿಖೆ ನಡೆಸುವುದು ಸರಿಯಲ್ಲ. ಬಿಎನ್‌ಎಸ್‌ಎಸ್ ಜಾರಿಗೆ ಬಂದ 2024ರ ಜುಲೈ 1 ಮತ್ತು ಅದರ ನಂತರ ಸಿಆರ್‌ಪಿಸಿ ಅಡಿ ಎಫ್‌ಐಆರ್ ದಾಖಲಿಸುವುದು ಸರಿಪಡಿಸಬಹುದಾದ ದೋಷ ಎಂದು ಹೇಳಲು ಸಾಧ್ಯವಿಲ್ಲ.
ದೂರಿನ ಮೂಲ ತಳಹದಿಯೇ ಲೋಪದಿಂದ ಕೂಡಿರುವಾಗ ಐಪಿಸಿ ಹಾಗೂ ಸಿಆರ್‌ಪಿಸಿ ಸೆಕ್ಷನ್ 154ರಡಿ ಎಫ್‌ಐರ್ ದಾಖಲಿಸಿಕೊಂಡು ಬಿಎನ್‌ಎಸ್‌ಎಸ್ ಸೆಕ್ಷನ್ 176ರಡಿ ತನಿಖೆ ನಡೆಸುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ. ಹಾಗಾಗಿ, ಬಿಎನ್‌ಎಸ್‌ಎಸ್ ಜಾರಿಗೆ ಬಂದ ಮೇಲೆ ಸಿಆರ್‌ಪಿಸಿ ಅಡಿ ದಾಖಲಾಗುವ ಎಫ್‌ಐಆರ್ ಸಮರ್ಥನೀಯವಲ್ಲ ಹಾಗೂ ಅದು ವಜಾಗೊಳ್ಳುವುದಕ್ಕೆೆ ಅರ್ಹವಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಹೈಕೋರ್ಟ್ ನಿರ್ದೇಶನಗಳು:
- ಬಿಎನ್‌ಎಸ್‌ಎಸ್ ಜಾರಿಗೆ ಬರುವ ಮೊದಲಿನ ಅಪೀಲು, ವಿಚಾರಣಾ ಅರ್ಜಿಗಳು, ತನಿಖೆ ಬಾಕಿ ಇರುವ ಪ್ರಕರಣಗಳನ್ನು ಸಿಆರ್‌ಪಿಸಿ ಅಡಿಯಲ್ಲಿ ಇತ್ಯರ್ಥಪಡಿಸಿ ಅಂತಿಮ ವರದಿಯನ್ನು ಸಿಆರ್‌ಪಿಸಿ ಸೆಕ್ಷನ್ 173ರಡಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು.
- ಸಿಆರ್‌ಪಿಸಿ, ಬಿಎನ್‌ಎಸ್‌ಎಸ್-2023, ಐಪಿಸಿ, ಬಿಎನ್‌ಎಸ್-2023 ವಿಚಾರದಲ್ಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳು ಅನುಸರಿಬೇಕು. ಈ ಆದೇಶವನ್ನು ರಿಜಿಸ್ಟ್ರೀ ಎಲ್ಲಾ ವಿಚರಣಾ ನ್ಯಾಯಾಲಯಗಳಿಗೆ ರವಾನಿಸಬೇಕು.
- ಹೈಕೋರ್ಟ್‌ನ ಈ ಆದೇಶವನ್ನು ಡಿಜಿಪಿ-ಐಜಿಪಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಬೇಕು. ಹೈಕೋರ್ಟ್ ಆದೇಶದ ಪ್ರತಿಯನ್ನು ಹೈಕೋರ್ಟ್ ರಿಜಿಸ್ಟ್ರೀ ಡಿಜಿಪಿ-ಐಜಿಪಿಗೆ ರವಾನಿಸಬೇಕು.
- ರಾಯಚೂರು ಜಿಲ್ಲೆಯ ಪ್ರಕರಣ ಹಾಗೂ ಕಲಬುರಗಿ ಹೈಕೋರ್ಟ್ ಪೀಠದ ಆದೇಶ ಆಗಿರುವ ಹಿನ್ನೆಲೆಯಲ್ಲಿ ಪೂರ್ವ ವಲಯ ಡಿಐಜಿ ಕಲಬುರಗಿ ವಿಭಾಗದ ಆಯುಕ್ತರು, ಕಲಬುರಗಿ ಎಸ್ಗೆ ಈ ಆದೇಶ ಕಳುಹಿಸಬೇಕು, ಅದನ್ನು ಅವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ರವಾನಿಸಬೇಕು.
ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ನರ್ಸ್ ಆಗಿ ಹಾಗೂ ಆರೋಪಿತ ಅರ್ಜಿದಾರ ಡಿ ಗ್ರೂಪ್ ನೌಕರರಾಗಿ ರಾಯಚೂರು ಜಿಲ್ಲೆ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾರೆ. 2021ರ ಮಾರ್ಚ್ 30ರಂದು ಸಂತ್ರಸ್ತೆಯ ಪತಿ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಈ ವೇಳೆ ಆರೋಪಿತ ಅರ್ಜಿದಾರ ಅರುಣ್ ಕುಮಾರ್ ಆಕೆಗೆ ಸಹಾಯ ಮಾಡಿರುತ್ತಾನೆ. ಈ ನಡುವೆ, ಸಂತ್ರಸ್ತೆಯ ಮನೆಗೆ ಅರ್ಜಿದಾರ ಹೋಗಿ ಬರುತ್ತಿರುತ್ತಾರೆ. ಮದುವೆಯಾಗಿ ನಂಬಿಸಿ ದೇವಸ್ಥಾನಕ್ಕೆಂದು ಕರೆದುಕೊಂಡು ಹೋಗಿ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ 2021ರ ಜೂ.24ರಂದು ಅತ್ಯಾಚಾರ ನಡೆಸಿರುತ್ತಾನೆ.
ಅಲ್ಲದೇ ಆಕೆಯಿಂದ 11.43 ಲಕ್ಷ ಹಣ ತನ್ನ ಖಾತೆಗೆ ವರ್ಗಾಹಿಸಿಕೊಂಡಿರುತ್ತಾನೆ. 2 ಲಕ್ಷ ರೂ. ನಗದು ಪಡೆದುಕೊಂಡಿರುತ್ತಾನೆ. ಹಣ ವಾಪಸ್ ನೀಡದೆ, ಮದುವೆಯೂ ಆಗದೆ ಸತಾಯಿಸಿರುತ್ತಾನೆ. ಇದರಿಂದ ನೊಂದು ಸಂತ್ರಸ್ತೆ ದೂರು ನೀಡಿರುತ್ತಾಳೆ. ದೂರನ್ನು ಆಧರಿಸಿ ಲಿಂಗಸುಗೂರು ಠಾಣೆ ಪೊಲೀಸರು 2024ರ ಜುಲೈ 1ರಂದು ಎಫ್‌ಐಆರ್ ದಾಖಲಿಸಿಕೊಂಡಿರುತ್ತಾರೆ. ಇದನ್ನು ಪ್ರಶ್ನಿಸಿ ಅರುಣ್ ಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ವಕೀಲರ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವ ಆದೇಶಗಳನ್ನು ಭಾರತೀಯ ವಕೀಲರ ಪರಿಷತ್ ಹೊರಡಿಸಲಾಗದು: ಹೈಕೋರ್ಟ್