ದಾವಣಗೆರೆ: ದಾವಣಗೆರೆ ನಗರದ ಪಿ.ಬಿ.ರಸ್ತೆಯಿಂದ ಮಾಗಾನಹಳ್ಳಿ ರಸ್ತೆಯವರೆಗೆ ರಿಂಗ್ ರಸ್ತೆ ಅಗಲೀಕರಣಕ್ಕಾಗಿ ರಾಮಕೃಷ್ಣ ಹೆಗಡೆ ನಗರ ಹಾಗೂ ಚಂದ್ರೋದಯ ನಗರದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಆದರೆ, ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಒದಗಿಸದೆ ಜನರನ್ನು ಸ್ಥಳಾಂತರಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ನಿರಾಶ್ರಿತರ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಾರಣ, ಜನರು ಅಲ್ಲಿಂದ ತೆರಳಿ ದಾವಣಗೆರೆಯಲ್ಲಿ ಬಾಡಿಗೆ ಮನೆಗಳನ್ನು ಪಡೆದು ವಾಸಿಸಲು ಪ್ರಾರಂಭಿಸಿದ್ದಾರೆ.
ದಾವಣಗೆರೆಗೆ ತಾಲೂಕಿನ ದೊಡ್ಡಬಾತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಸರ್ವೇ ನಂಬರ್ 54 ಖಾಲಿ ಜಾಗಕ್ಕೆ ಹೆಗಡೆ ನಗರದ ನಿವಾಸಿಗಳನ್ನು ಕಳೆದ ಡಿಸೆಂಬರ್ 2ರ ರಾತ್ರಿ ಸ್ಥಳಾಂತರಿಸಲಾಗಿದೆ. ಚಳಿಗಾಲ ಮತ್ತು ಬೇಸಿಗೆಯನ್ನು ಜನರು ನಿರಾಶ್ರಿತರ ಪ್ರದೇಶದಲ್ಲೇ ಕಳೆದಿದ್ದರು. ಆದರೆ ಭಾರಿ ಮಳೆ, ಗಾಳಿ ಎದುರಾಗಿ ಹಾಕಿಕೊಂಡಿದ್ದ ಗುಡಿಸಲುಗಳ ಶೀಟ್, ತಾಡಪಾಲುಗಳು ಹಾರಿಹೋಗಿ ಜೀವ ಉಳಿಸಿಕೊಳ್ಳಲು ಜನ ನಗರಕ್ಕೆ ಮರಳಿದ್ದಾರೆ.
ಇದೀಗ ಜನರಿಲ್ಲದೆ ಇಡೀ ನಿರಾಶ್ರಿತರ ಪ್ರದೇಶ ಬಿಕೋ ಎನ್ನುತ್ತಿದೆ. ಗುಡಿಸಲುಗಳು ಮಾತ್ರ ಉಳಿದಿವೆ. ಕೆಲವರು ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದು, ಬಾಡಿಗೆ ಹಣ ಕಟ್ಟಲಾಗದವರು ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಹೋರಾಟಗಾರ ಅವರಗೆರೆ ವಾಸು ಮಾಹಿತಿ ನೀಡಿದರು.
ಮೂಲಭೂತ ಸೌಕರ್ಯ ನೀಡದಿದ್ದರೆ ಹೋರಾಟ: ಹೋರಾಟಗಾರ ವಾಸು 'ಈಟಿವಿ ಭಾರತ್' ಜೊತೆ ಮಾತನಾಡಿ, "ಹೆಗಡೆ ನಗರದಲ್ಲಿ 450 ಕುಟುಂಬಗಳನ್ನು ರಸ್ತೆ ಅಗಲೀಕರಣಕ್ಕಾಗಿ ಸ್ಥಳಾಂತರ ಮಾಡಲಾಗಿದೆ. ಆದರೆ 240 ಕುಟುಂಬಗಳಿಗೆ ಮಾತ್ರ ದೊಡ್ಡಬಾತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ರಾತ್ರೋರಾತ್ರಿ ಜನರನ್ನು ಸ್ಥಳಾಂತರ ಮಾಡಿ, ನಿವೇಶನ ನೀಡಿರುವ ಜಾಗದಲ್ಲಿ ಮೂಲಭೂತ ಸೌಲಭ್ಯ ನೀಡುವಲ್ಲಿ ಪಾಲಿಕೆ ಎಡವಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಜನ ದಾವಣಗೆರೆಗೆ ವಾಪಸ್ ಬಂದು ಬಾಡಿಗೆ ಮನೆಗಳಲ್ಲಿ ಜೀವನ ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಕೆ.ಚಮನ್ ಸಾಬ್ ಹೇಳಿದ್ದೇನು?: "ರಸ್ತೆ ಅಗಲೀಕರಣ ಸಂಬಂಧ ಹೆಗಡೆ ನಗರದ ನಿವಾಸಿಗಳನ್ನು ದೊಡ್ಡ ಬಾತಿ ಪಂಚಾಯತಿ ವ್ಯಾಪ್ತಿಗೆ ಸ್ಥಳಾಂತರ ಮಾಡಲಾಗಿತ್ತು. ಅವರಿಗಾಗಿ 400 ಮನೆಗಳು ಮಂಜೂರಾಗಿವೆ. ಹಕ್ಕುಪತ್ರಗಳನ್ನೂ ನೀಡಲಾಗಿದೆ. ಅಲ್ಲಿ ಮೂಲಭೂತ ಸೌಲಭ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಅದರೆ ಜನ ಮಾತ್ರ ಅಲ್ಲಿ ವಾಸ ಮಾಡದೆ ದಾವಣಗೆರೆ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದಾರೆ. ಶೀಘ್ರವಾಗಿ ಹಣ ಬಂದರೆ ಮನೆ ಕಟ್ಟಿಕೊಡುತ್ತೇವೆ" ಎಂದು ಮೇಯರ್ ಕೆ.ಚಮನ್ ಸಾಬ್ ಮಾಹಿತಿ ನೀಡಿದರು.