ಬೆಂಗಳೂರು: ಆರೋಗ್ಯ ಜಾಗೃತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ವಿಶ್ವ ಆರೋಗ್ಯ ಸಂಸ್ಥೆ ನೀಡುವ ‘ನೆಲ್ಸನ್ ಮಂಡೇಲಾ ಪ್ರಶಸ್ತಿ’ಗೆ ಭಾಜನವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು 2019 ರಿಂದ ಈ ಪ್ರಶಸ್ತಿ ನೀಡುತ್ತಿದೆ. ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನಿಮ್ಹಾನ್ಸ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಸ್ಥೆಯು ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಜತೆಗೆ ಸಂಶೋಧನೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದೆ.
ಈ ಕುರಿತು ಮಾತನಾಡಿರುವ ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, "ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ಹೆಮ್ಮೆಪಡುತ್ತೇವೆ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ನಮ್ಮ ಧ್ಯೇಯವನ್ನು ಮುಂದುವರಿಸುತ್ತೇವೆ. ಈ ಪ್ರಶಸ್ತಿಯು ನಮ್ಮ ಹಿಂದಿನ ಮತ್ತು ಪ್ರಸ್ತುತ ಸಾಧನೆಗಳ ಮನ್ನಣೆ ಮಾತ್ರವಲ್ಲದೆ, ಆರಂಭದಿಂದಲೂ ನಿಮ್ಹಾನ್ಸ್‌ಗೆ ಮಾರ್ಗದರ್ಶನ ನೀಡಿದ ನಿರಂತರ ಪರಂಪರೆ ಮತ್ತು ದೃಷ್ಟಿಕೋನಕ್ಕೆ ದೊರಕಿದ ಮಾನ್ಯತೆಯಾಗಿದೆ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ನಮ್ಮ ಧ್ಯೇಯವನ್ನು ಮುಂದುವರಿಸುವ ನಮ್ಮ ಸಂಕಲ್ಪವನ್ನು ಇದು ಇನ್ನಷ್ಟು ಇಮ್ಮಡಿಗೊಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಶಸ್ತಿ ಲಭಿಸಿದ್ದಕ್ಕಾಗಿ ಸಂಸ್ಥೆಯನ್ನು ಅಭಿನಂದಿಸಿದ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ, "ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಎಲ್ಲರನ್ನೂ ಒಳಗೊಂಡಿರುವ ಭಾರತದ ಪ್ರಯತ್ನಗಳಿಗೆ ದೊರಕಿದ ಮನ್ನಣೆಯಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಹಾನ್ಸ್ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ 33 ಸರ್ಕಾರಿ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಕೇಂದ್ರ ಓಪನ್