ದೊಡ್ಡಬಳ್ಳಾಪುರ: ಬಿಜೆಪಿ ಮತ್ತು ಜೆಡಿಎಸ್ನ ಮೈತ್ರಿ ನೈತಿಕವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳದ್ದು ನ್ಯಾಚುರಲ್ ಅಲಯನ್ಸ್. ಹಿಂದೊಮ್ಮ ಕಾಂಗ್ರೆಸ್ ಪಕ್ಷದೊಂದಿಗೆ ಅನೈತಿಕ ಮೈತ್ರಿ ಮಾಡಿಕೊಂಡ ಪಕ್ಷ ಒಂದು ಸ್ಥಾನಕ್ಕೆ ಕುಸಿದಿತ್ತು. ಇದೀಗ ಮೈತ್ರಿ ಮೂಲಕ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಸಮರ ಸಾರಿದ್ದೇವೆ ಎಂದರು.
ರಾಜ್ಯದ ಯಾವುದೇ ಕ್ಷೇತ್ರಕ್ಕೆ ಹೋದರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಜೊತೆ ಜೊತೆಯಾಗಿ ಸಾಗುತ್ತಿದ್ದಾರೆ. ಪಕ್ಷತೀತವಾಗಿ ಶ್ರಮಿಸುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಎರಡು ಪಕ್ಷದ ನಾಯಕರು ಮಾಡುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೂ ಎಚ್. ಡಿ. ಕುಮಾರಸ್ವಾಮಿ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಮತ್ತು ರಾಮನಗರವನ್ನು ಜಿಲ್ಲೆಗಳನ್ನಾಗಿ ಘೋಷಣೆ ಮಾಡಿದ್ದರು. ಇಂದಿಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಎಚ್ಡಿಕೆ ಅಭಿಮಾನಿಗಳಿದ್ದು ಇದು ಡಾ. ಕೆ. ಸುಧಾಕರ್ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಯಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಚ್ಚೇಗೌಡರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವೈಯಕ್ತಿಕವಾಗಿ ಬಚ್ಚೇಗೌಡರ ಮೇಲೆ ಅಪಾರವಾದ ಗೌರವಿದ್ದು, ಈ ಹಿಂದೆ ಜೆಪಿ ನಗರದ ನಿವಾಸದಲ್ಲಿ ಭೇಟಿ ಮಾಡಿದ ಸಂದರ್ಭ ಪಕ್ಷಕ್ಕೆ ರಾಜೀನಾಮೆ ನೀಡದಂತೆ ನಾನು ಮತ್ತು ನಮ್ಮ ತಂದೆಯವರು ಮನವಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷ ನೀಡುವ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಎಚ್ಚರಿಸಿದ್ದೆವು. ಆದರೂ ಇಂದು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ತಿಳಿದು ಬಂದಿದೆ. ರಾಜಕೀಯ ಜೀವನ ಇದು ಅವರ ವೈಯಕ್ತಿಕ ನಿರ್ಧಾರ ಎಂದರು.
ಇದನ್ನೂ ಓದಿ: ಯಾರು ಏನೇ ತಂತ್ರ ಮಾಡಿದರೂ ಮತ್ತೆ ಕುಮಾರಸ್ವಾಮಿ ಸರ್ಕಾರ ಬರೋದು ಖಚಿತ: ದೇವೇಗೌಡ ಭವಿಷ್ಯ - HD Devegowda